ಬೆಂಗಳೂರು: ಹಿಂದಿನ ಸರ್ಕಾರಗಳ ಹಗರಣಗಳ ತನಿಖೆಗೆ ಆಯೋಗ ರಚಿಸಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರಿ ಗುತ್ತಿಗೆ ನಿರ್ವಹಣೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಏಕಾಏಕಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.
ಹಾಗಾಗಿ ಒಂದು ತನಿಖಾ ಆಯೋಗ ರಚಿಸಬೇಕು. ಸಮಗ್ರ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು. ಹಲವಾರು ಇಲಾಖೆಗಳಲ್ಲಿ ಭ್ರಷ್ಟಾಚಾರಗಳು ಮಿತಿಮೀರಿದ್ದವು ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬಂದಿವೆ. ನಾವು ಚುನಾವಣೆ ವೇಳೆ ಈ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ದೇವೆ. ನಮ್ಮ ಭರವಸೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಣವೂ ಒಂದು ಎಂದು ಹೇಳಿದರು.
ಇನ್ನೂ ಲಿಂಗಾಯತ ಸಮುದಾಯದಲ್ಲಿ ನಾನು ಹೆಚ್ಚು ಬಾರಿ ಗೆದ್ದಿದ್ದೇನೆ. ಜಾತಿ ಆಧಾರದ ಮೇಲೆ ಅವಕಾಶ ಕೇಳುವುದಿಲ್ಲ. ಆದರೆ, ಹಿರಿತನವನ್ನು ಆಧರಿಸಿ ತಮಗೂ ಉಪಮುಖ್ಯಮಂತ್ರಿ ಹುದ್ದೆ ಕೊಡಬೇಕು. ಆದರೆ, ಸಂಪುಟದಲ್ಲಿ ಅವಕಾಶ ಕಲ್ಪಿಸುವ ಅಥವಾ ಬಿಡುವ ನಿರ್ಧಾರವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ. ಬಹುತೇಕ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.