ಮಲೆನಾಡಿನ ಜೀವನದಿಯಾದ ತುಂಗೆ ಈ ಬಾರಿ ನೀರಿನ ಹರಿವನ್ನೆ ನಿಲ್ಲಿಸಿದ್ದಾಳೆ. ಬೇಸಿಗೆಯಲ್ಲಿ ಅಲ್ಲಲ್ಲಿ ಬತ್ತಿದಂತೆ ಕಾಣುತ್ತಿದ್ದ ತೀರ ಪ್ರದೇಶ ಈ ಬಾರಿ ಸಂಪೂರ್ಣ ಬತ್ತಿಹೋಗಿದೆ. ಬೇಸಿಗೆಯ ಬೆಳೆ ನಂಬಿದ್ದ ಅಚ್ಚುಕಟ್ಟು ಪ್ರದೇಶದ ರೈತರು ತೋಟ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮತ್ತೊಂದೆಡೆ ನೀರಿಗೆ ಹಾಹಾಕಾರ ಎದುರಾಗಿ ಪಾರಂಪಾರಿಕ ಮೀನು ಸಂತಿತಿಗಳು ನಶಿಸಿ ಹೋಗುತ್ತಿದೆ. ನೀರಿಲ್ಲದೆ ಮೀನುಗಳು ಹೊರಬರುತ್ತಿರುವುದರಿಂದ ನಾಯಿಗಳು ಅನಾಯಾಸವಾಗಿ ಬೇಟೆಯಾಡುತ್ತಿದೆ. ಇನ್ನು ಬತ್ತಿದ ನದಿಯಿಂದಾಗಿ ಒಣಗಿದ ಬಿದುರುಮಟ್ಟೆಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗುತ್ತಿದೆ.
ತುಂಗಾ ಪಾನ ಗಂಗಾ ಸ್ನಾನ ಎನ್ನುವ ನಾಣ್ನುಡಿಗೆ ತಕ್ಕಂತೆ ತುಂಗಾ ನದಿಯ ನೀರು ಯಾವ ಮಿನರಲ್ ವಾಟರ್ ಗಿಂತಲೂ ಕಮ್ಮಿಇಲ್ಲ. ಬೆಟ್ಟಗುಡ್ಡಗಳ ಠಿಸಿಲೊಡೆದುಕೊಂಡು ಹರಿಯುವ ನದಿ ಔಷಧಿಯ ಗುಣವನ್ನು ಹೊಂದಿದೆ. ವರ್ಷ ಪೂರ್ತಿ ಹರಿಯುವ ನದಿಯೆಂದೇ ತುಂಗಾ ನದಿ ಪ್ರಖ್ಯಾತಿಯನ್ನು ಹೊಂದಿದೆ. ಆದರೆ ಇತ್ತಿಚ್ಚಿನ ವರ್ಷಗಳಲ್ಲಿ ನದಿಪಾತ್ರದ ಮರಳು ಗಣಿಗಾರಿಕೆ ಪರಿಸರ ನಾಶದಿಂದ ನದಿ ತನ್ನ ಹರಿವಿನ ದಿಕ್ಕನ್ನೇ ಬದಲಿಸಿದೆ. ಅಲ್ಲದೆ ಬೇಸಿಗೆಯಲ್ಲಿ ತುಂಗಾ ನದಿ ಹರಿವನ್ನೇ ನಿಲ್ಲಿಸುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಕಾರಣ ಮಳೆ ನಿಗದಿತ ಸಮಯಕ್ಕೆ ಆಗದಿರುವುದು, ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳಲು ಯತೆಚ್ಚವಾಗಿ ಪಂಪ್ ಸೆಟ್ ಗಳ ಬಳಸುವುದು ಅಲ್ಲದೆ ಅಕ್ರಮ ಮರಳು ಗಣಿಗಾರಿಕೆ ಮಾಫಿಯಕ್ಕೆ ಯುಟಿಪಿ ಅಧಿಕಾರಿಗಳು ಕೈಜೋಡಿಸಿ, ಬೇಸಿಗೆಯಲ್ಲಿ ಡ್ಯಾಂ ನ ನೀರಿನ ಪ್ರಮಾಣ ತಗ್ಗಿಸುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.
ಕಾರಣಗಳೂ ಏನೇ ಇದ್ದರೂ ಈ ಬಾರಿ ತುಂಗಾ ನದಿ ಅಕ್ಷರ ಸಹ ಬರಿದಾಗಿ ಹೋಗಿದೆ. ನದಿಯ ತಟದ ಭೂಮಿ ಬಾಯ್ಬಿರಿದು ಒಣಗಿ ಹೋಗಿದೆ. ನದಿಯಲ್ಲಿ ನೀರಿಲ್ಲದೆ ಮೀನುಗಳು ಸಾಯುತ್ತಿವೆ. ದೇವರ ಮೀನುಗಳಿರುವ ಪ್ರದೇಶವೆಂದೇ ಖ್ಯಾತಿ ಪಡೆದಿರುವ ಚಿಪ್ಪಲುಗುಡ್ಡೆಯ ತುಂಗಾ ನದಿ ಪಾತ್ರದ ಮೀನುಗಳು ಸಾವನ್ನಪ್ಪುತ್ತಿವೆ. ಮೀನುಗಳನ್ನು ಬೇಟೆಯಾಡಲು ನಾಯಿಗಳು ನದಿ ಪ್ರದೇಶಕ್ಕೆ ಲಗ್ಗೆ ಇಡುವ ದೃಷ್ಯಗಳು ಸಾಮಾನ್ಯವಾಗಿದೆ. ರಾತ್ರಿವೇಳೆ ಕಾಡುಪ್ರಾಣಿಗಳಿಗೆ ನೀರಿಗೆ ಹಾಹಾಕಾರ ಎದುರಾಗಿದೆ. ತುಂಗಾನದಿ ಅವಲಂಬಿತ ಸಸ್ಯ ಪ್ರಾಣಿಸಂಕುಲಕ್ಕೆ ಸಂಕಷ್ಟ ಎದುರಾಗಿದೆ. ಇದು ತುಂಗಾ ನದಿಯ ನರಕ ದರ್ಶನವಾದ್ರೆ. ಮತ್ತೊಂದೆಡೆ ಬತ್ತಿದ ತುಂಗೆಯ ಒಡಲು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಹಿನ್ನೀರಿನಲ್ಲಿರುನ ಒಣಗಿದ ಬಿದುರುಮಟ್ಟಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ನದಿಯ ಮದ್ಯಭಾಗದವರೆಗೂ ಹೋಗುವಷ್ಟು ಬರಿದಾಗಿರುವ ತುಂಗಾ ನದಿಯ ತೀರದಲ್ಲಿ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಕುಟುಂಬ ಪರಿವಾರದೊಡನೆ ಬಂದು ಆಹಾರ ಸೇವಿಸುತ್ತಾರೆ. ಸದ್ಯಕ್ಕೆ ತುಂಗಾ ತೀರ ಪಿಕ್ ನಿಕ್ ಸ್ಪಾಟ್ ಆಗಿ ಪರಿವರ್ತತವಾದ್ರೂ, ನದಿಯ ಒಡಲು ಆಗಸಕ್ಕೆ ಮುಖಮಾಡಿ, ಮಳೆಯನ್ನು ಬಯಸುತ್ತಿದೆ. ಪ್ರತಿದಿನ ಮಳೆ ಬೀಳುವಂತ ವಾತಾವರಣ ನಿರ್ಮಾಣವಾಗುತ್ತದೆಯಾದ್ರೂ, ಧರೆಗೆ ಒಂದು ಮಳೆ ಹನಿಯ ಸಿಂಚನವೂ ಕೂಡ ಆಗುತ್ತಿಲ್ಲ. ಮುಂಗಾರು ಸಕಾಲದಲ್ಲಿ ಪ್ರವೇಶವಾಗಲಿ ಎಂದು ಜನತೆ ಎದುರು ನೋಡುತ್ತಿದ್ದಾರೆ.