ಜೈಪುರ: ರಾಜಸ್ಥಾನದ (Rajasthan) ಜೈಪುರದಲ್ಲಿರುವ (Jaipur) ಸರ್ಕಾರಿ ಕಟ್ಟಡದ ಯೋಜನ ಭವನದ ನೆಲಮಾಳಿಗೆಯಲ್ಲಿ ಬೀಗ ಹಾಕಲಾಗಿದ್ದ ಕಪಾಟಿನಲ್ಲಿ 2.31 ಕೋಟಿ ರೂ.ಗೂ ಅಧಿಕ ನಗದು ಹಾಗೂ 1 ಕೆಜಿ ಚಿನ್ನ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಮಾಳಿಗೆಗೆ (Basement) ಪ್ರವೇಶ ಹೊಂದಿರುವ ಯೋಜನಾ ಭವನದ ಏಳು ಉದ್ಯೋಗಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಕಪಾಟಿನಲ್ಲಿ ಇರಿಸಲಾಗಿದ್ದ ಟ್ರಾಲಿ ಸೂಟ್ಕೇಸ್ನಲ್ಲಿ 2,000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದು, ಆರ್ಬಿಐ 2,000 ರೂ. ಕರೆನ್ಸಿ ಚಲಾವಣೆ ಹಿಂತೆಗೆದುಕೊಂಡ ದಿನ ಈ ಘಟನೆ ನಡೆದಿದೆ.
ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು ಈ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರಿಗೆ ಮಾಹಿತಿ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಉಮೇಶ್ ಮಿಶ್ರಾ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ದಿನೇಶ್ ಎಂಎನ್ ಮತ್ತು ಜೈಪುರ ಕಮಿಷನರ್ ಆನಂದ ಶ್ರೀವಾಸ್ತವ ಅವರು ಶುಕ್ರವಾರ ತಡರಾತ್ರಿ ಸಚಿವಾಲಯದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಪುರ ಕಮೀಷನರ್ ಶ್ರೀವಾಸ್ತವ, ಕಪಾಟಿನಲ್ಲಿ ಅನೇಕ ಫೈಲ್ಗಳು ಮತ್ತು ಟ್ರಾಲಿ ಸೂಟ್ಕೇಸ್ನಲ್ಲಿ ಚಿನ್ನ ಮತ್ತು ನಗದು ತುಂಬಿದೆ ಎಂದು ಅಲ್ಲಿನ ನೌಕರರು ಅಶೋಕ್ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದರು.
ಇ-ಫೈಲಿಂಗ್ ಯೋಜನೆಯಡಿ ಕಡತಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಅಲ್ಲದೇ ಬೀಗ ಹಾಕಿದ್ದ ಎರಡು ಕಪಾಟುಗಳ ಕೀಗಳು ಪತ್ತೆಯಾದ ನಂತರ ಅವುಗಳನ್ನು ತೆರೆಯಲಾಗಿದೆ. ಏಳು ಮಂದಿ ನೌಕರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಸಂಪೂರ್ಣ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿ ಸಂಪೂರ್ಣ ವಿಷಯವನ್ನು ಬಹಿರಂಗಪಡಿಸಲಾಗುವುದು ಎಂದು ವರದಿಗಳು ತಿಳಿಸಿವೆ. ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡ ಕಪಾಟಿಗೆ ಹಲವು ತಿಂಗಳುಗಳಿಂದ ಬೀಗ ಹಾಕಲಾಗಿತ್ತು. ಆಧಾರ್-ಯುಐಡಿ-ಸಂಯೋಜಿತ ಸಿಬ್ಬಂದಿಯ ಸಹಾಯದಿಂದ ನೆಲಮಾಳಿಗೆಯನ್ನು ಪ್ರವೇಶಿಸಿದ ಪೊಲೀಸರು ನೆಲಮಾಳಿಗೆಗೆ ಪ್ರವೇಶವಿರುವ ಉದ್ಯೋಗಿಗಳನ್ನು ಈ ಕುರಿತು ಪ್ರಶ್ನೆ ಮಾಡಿದ್ದಾರೆ.