ನವದೆಹಲಿ: ಸಂಸತ್ ಭವನ ಉದ್ಘಾಟನೆಗೆ ಕೇವಲ ಒಂದು ವಾರ ಬಾಕಿಯಿದ್ದು, ಪ್ರಧಾನಿ ನರೇಂದ್ರ ಮೋದಿ ಬದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಹೊಸ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮೇ 28 ರಂದು ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ನಿಗದಿಯಾಗಿದೆ.
ಭಾರತದ ಮಹಾನ್ ಪುತ್ರ ವಿನಾಯಕ ದಾಮೋದರ್ ಸಾವರ್ಕರ್ ಅವರ 140ನೇ ಜನ್ಮದಿನವಾದ ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ’ ಎಂದು ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ವೀರ್ ಸಾವರ್ಕರ್ ಅವರು 1883ರ ಮೇ 28ರಂದು ಭಾಗೂರಿನಲ್ಲಿ ಜನಿಸಿದರು. ಹೊಸ ಸಂಸತ್ತು ಕನಿಷ್ಠ 150 ವರ್ಷಗಳ ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಸದ್ಯದ, ಸಂಸತ್ ಕಟ್ಟಡ 100 ವರ್ಷಗಳಿಗೆ ಬಾಳಿಕೆ ಬರುತ್ತದೆ ಎಂದು ಅವರು ಹೇಳಿದರು.