ನವದೆಹಲಿ: ಆರ್ ಬಿಐ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಗಳ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಮತ್ತೊಂದು “ತುಘಲಕಿ ನೋಟು ಅಮಾನ್ಯೀಕರಣ ಡ್ರಾಮ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಇದು ಎರಡನೇ “ನೋಟುಬಂಡಿ” ಕಸರತ್ತು ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಇದು ನೋಟು ಅಮಾನ್ಯೀಕರಣ ಅಲ್ಲ ಎಂದಿರುವ ಬಿಜೆಪಿ, ಮನಮೋಹನ್ ಸಿಂಗ್ ಆಳ್ವಿಕೆಯಲ್ಲಿಯೂ ಹಳೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿತ್ತು ಎಂದು ಕಾಂಗ್ರೆಸ್ ನೆನಪಿಸಿದೆ. 2000 ರೂಪಾಯಿ ನೋಟ್ ನಿಷೇಧ ಕ್ರಮವು “ಸಾಮಾನ್ಯ ಜನರನ್ನು ಮತ್ತೊಮ್ಮೆ ತೀವ್ರ ಸಂಕಷ್ಟಕ್ಕೆ ಸಿಲುಕಿಸಲಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “2000 ರೂಪಾಯಿ ನೋಟ್ ನಿಷೇಧ ಮತ್ತೊಂದು ವಿಚಿತ್ರ ಮತ್ತು ತುಘಲಕಿ ನೋಟು ಅಮಾನ್ಯೀ ಕರಣದ ನಾಟಕವಾಗಿದ್ದು, ಇದು ಸಾಮಾನ್ಯ ಜನರನ್ನು ಮತ್ತೊಮ್ಮೆ ತೀವ್ರ ಸಂಕಷ್ಟಕ್ಕೆ ಸಿಲುಕಿಸಲಿದೆ. ಈ ದುಷ್ಕೃತ್ಯದ ಕ್ರಮಗಳು ಮೂಲಭೂತವಾಗಿ ಜನವಿರೋಧಿ ಎಂದು ಆರೋಪಿಸಿದ್ದಾರೆ. ಇನ್ನು ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ.