ಮಾಸ್ಕೋ: ರಷ್ಯಾ ದೇಶದ ಸೈನಿಕರ ಬೆಂಬಲದೊಂದಿಗೆ ಖಾಸಗಿ ಮಿಲಿಟರಿ ಸಂಸ್ಥೆಯಾದ ವ್ಯಾಗ್ನರ್ ಸೇನೆಯ ಪಡೆಗಳು ಉಕ್ರೇನ್ ನಗರವಾದ ಬಖ್ಮುತ್ ಅನ್ನು ವಶಪಡಿಸಿಕೊಂಡಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಟೆಲಿಗ್ರಾಮ್ ಚಾನೆಲ್ನಲ್ಲಿ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಹೇಳಿಕೆ ನೀಡಿದ ಸುಮಾರು ಎಂಟು ಗಂಟೆಗಳ ನಂತರ ರಕ್ಷಣಾ ಸಚಿವಾಲಯ ಈ ಮಾಹಿತಿ ನೀಡಿತು. ಇದೇ ಸಮಯದಲ್ಲಿ ಉಕ್ರೇನಿಯನ್ ಅಧಿಕಾರಿಗಳು ಬಖ್ಮುತ್ ನಗರದಲ್ಲಿ ಹೋರಾಟ ಮುಂದುವರೆಸಿರುವುದಾಗಿ ಹೇಳಿದ್ದಾರೆ.
ಪೂರ್ವ ಉಕ್ರೇನ್ನಲ್ಲಿ ಬಖ್ಮುತ್ ನಗರ ವಶಪಡಿಸಿಕೊಂಡ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವ್ಯಾಗ್ನರ್ ಖಾಸಗಿ ಮಿಲಿಟರಿ ಮತ್ತು ರಷ್ಯಾದ ಪಡೆಗಳ ಆಕ್ರಮಣ ತಂಡಗಳನ್ನು ಅಭಿನಂದಿಸಿದ್ದಾರೆ. ಆರ್ಟಿಯೊಮೊವ್ಸ್ಕ್ ಅನ್ನು ಸ್ವತಂತ್ರಗೊಳಿಸುವ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವುದರೊಂದಿಗೆ, ಅಗತ್ಯವಿರುವ ನೆರವು ನೀಡುವುದಾಗಿ ಪುಟೀನ್ ಹೇಳಿದ್ದಾರೆ.
ಪೂರ್ವ ಉಕ್ರೇನ್ನಲ್ಲಿರುವ ಈ ನಗರಕ್ಕಾಗಿ ಕಳೆದ ಎಂಟು ತಿಂಗಳುಗಳಿಂದ ನಡೆಯುತ್ತಿರುವ ಈ ಸಂಘರ್ಷ ಅತ್ಯಂತ ಭೀಕರವಾಗಿದೆ. ಟೆಲಿಗ್ರಾಮ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಶನಿವಾರ ಮಧ್ಯಾಹ್ನದ ಹೊತ್ತಿಗೆ ನಗರವು ಸಂಪೂರ್ಣ ರಷ್ಯಾದ ನಿಯಂತ್ರಣಕ್ಕೆ ಬಂದಿತು ಎಂದು ಹೇಳಿದರು. ಆದರೆ ಉಕ್ರೇನಿಯನ್ ಉಪ ರಕ್ಷಣಾ ಸಚಿವ ಹನ್ನಾ ಮಲಿಯಾರ್ ಅವರು ಹೋರಾಟ ಮುಂದುವರೆದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ನಮ್ಮ ಸೈನಿಕರು ಈ ಪ್ರದೇಶದಲ್ಲಿ ಕೆಲವು ಕೈಗಾರಿಕಾ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ನಿಯಂತ್ರಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ರಷ್ಯಾ ಪಡೆಗಳು ಬಖ್ಮುತ್ ಮೇಲೆ ಹಿಡಿತ ಸಾಧಿಸಿದರೆ, ಅವರು ಇನ್ನೂ ಉಕ್ರೇನಿಯನ್ ನಿಯಂತ್ರಣದಲ್ಲಿರುವ ಡೊನೆಟ್ಸ್ಕ್ ಪ್ರದೇಶದ ಉಳಿದ ಭಾಗವನ್ನೂ ವಶಪಡಿಸಿಕೊಳ್ಳುವ ಬೃಹತ್ ಕಾರ್ಯ ಮಾಡಬೇಕಾಗುತ್ತದೆ. ಇದರಲ್ಲಿ ಹಲವಾರು ಭದ್ರವಾದ ಪ್ರದೇಶಗಳು ಸೇರಿವೆ. ಬಖ್ಮುತ್ ಯುದ್ಧದಲ್ಲಿ ಯಾವ ಕಡೆಯವರು ಹೆಚ್ಚಿನ ಬೆಲೆ ತೆತ್ತಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಷ್ಯಾ ಮತ್ತು ಉಕ್ರೇನ್ ಎರಡೂ ಪಡೆಗಳಲ್ಲಿ ಅಧಿಕ ಸಾವು-ನೋವುಗಳ ಸಂಭವಿಸಿರುವ ಶಂಕೆಯಿದ್ದು ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.