ಬೆಂಗಳೂರು: ರಾಜ್ಯ ಸೇವೆಯಿಂದ ಬಿಡುಗಡೆ ಹಿನ್ನೆಲೆ ಪ್ರವೀಣ್ ಸೂದ್ ( Praveen Sood) ಅವರು ಸಹೋದ್ಯೋಗಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ರಾಜ್ಯ ಪೊಲಿಸ್ ಇಲಾಖೆಯ ಮುಖ್ಯಸ್ಥನಾಗಿ ಭಾರವಾದ ಹೃದಯದಿಂದ ಈ ಕೊನೆಯ ಪತ್ರ ಬರೆಯುತ್ತಿದ್ದೇನೆ. ಮೂರು ವರ್ಷಗಳ ಕಾಲ ಮಾರಿಷನ್ ದೇಶದಲ್ಲಿ ಪೊಲೀಸ್ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದರ ಹೊರತಾಗಿ ಇಲಾಖೆಯಲ್ಲಿ 37 ವರ್ಷ ಹಾಗೂ ಇಲಾಖಾ ಮುಖ್ಯಸ್ಥನಾಗಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಇಲಾಖೆಯ ವಿವಿಧ ಹುದ್ದೆಗಳಲ್ಲಿ ವೃತ್ತಿಪರತೆ ಮತ್ತು ಸೇವಾ ಮನೋಭಾವದಿಂದ ನನ್ನನ್ನು ಅರ್ಪಿಸಿಕೊಂಡಿದ್ದೇನೆ’ ಎಂದು ತಿಳಿಸಿದ್ದಾರೆ
ಪ್ರತಿಯೊಬ್ಬ ಐಪಿಎಸ್ ಅಧಿಕಾರಿಗೆ ನಾಯಕತ್ವ ಮೂಲಗುಣ ಎಂಬುದು ನೆನಪಿರಬೇಕು. ಐಪಿಎಸ್ ಅಧಿಕಾರಿಗಳು ಇಲಾಖೆಯ ಸುಧಾರಣೆಗಾಗಿ ಯಾವುದೇ ನಿರ್ದಿಷ್ಟಹುದ್ದೆಯನ್ನು ಅಲಂಕರಿಸಲು ಕಾಯಬಾರದು. ಜಿಲ್ಲಾ ವರಿಷ್ಠಾಧಿಕಾರಿ, ಆಯುಕ್ತರು ಅಥವಾ ಮಹಾನಿರ್ದೇಶಕರ ಹುದ್ದೆಯನ್ನೇರಿದರೆ ಮಾತ್ರ ಬದಲಾವಣೆ ಸಾಧ್ಯವೆಂದು ಕಾಯುತ್ತಾ ಕೂರುವುದು ಸಮಂಜಸವಲ್ಲ. ಪೊಲೀಸ್ ಪಡೆಯ ಸುಧಾರಣೆಗೆ ಪ್ರತಿಯೊಂದು ಹುದ್ದೆಯು ನಮಗೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ. ಮಾಧ್ಯಮಗಳು ಕೆಲವೊಂದು ಹುದ್ದೆಗಳನ್ನು ಎಲ್ಲರ ಹುಬ್ಬೇರುವಂತೆ ವರ್ಣರಂಜಿತವಾಗಿ ಬಿಂಬಿಸುತ್ತವೆ.
ಆದರೆ ಇನ್ನುಳಿದ ಹುದ್ದೆಗಳು ಕೇವಲ ಅಧೀನ ಸಿಬ್ಬಂದಿಯ ನಿಶ್ಯಬ್ದ ಹೊಗಳಿಕೆಗೆ ಪಾತ್ರವಾಗುತ್ತವೆ. ನಿಜವಾಗಿ ಅಷ್ಟೇನೂ ಮಹತ್ವವಲ್ಲದ ಹುದ್ದೆಗಳಲ್ಲಿ ವ್ಯವಸ್ಥೆಯ ಬದಲಾವಣೆಗೆ ಉತ್ತಮ ಅವಕಾಶ ಲಭಿಸುತ್ತದೆ. ಮಾಧ್ಯಮದವರು ಇದನ್ನು ಗಮನಿಸಲಾರರು. ಆದರೆ, ವೀಕ್ಷಕನಾಗಿ ಸಾಮಾನ್ಯ ಕಾನ್ಸ್ಟೇಬಲ್ ಇದನ್ನು ಗುರುತಿಸಲು ಶಕ್ತನಾಗಿರುತ್ತಾನೆ. ಇವರೇ ಅಧಿಕಾರಿಗಳ ಕಾರ್ಯವೈಖರಿಯ ನಿಜವಾದ ತೀರ್ಪುಗಾರರು’ ಎಂದು ತಮ್ಮ ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ. ರಾಜ್ಯದ ಜನತೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಅಪಾರ ಪ್ರೀತಿ ತೋರಿದ್ದಾರೆ. ಕರ್ನಾಟಕ ರಾಜ್ಯ ನನ್ನ ಜನ್ಮಭೂಮಿ ಅಲ್ಲದಿದ್ದರೂ ಇದು ನನ್ನ ಕರ್ಮಭೂಮಿ ಎಂದು ಹೇಳಿದ್ದಾರೆ.