ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ನೇತೃತ್ವದ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಿ ಎಂದು ‘ಕೈ’ ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ. ರಾಜ್ಯದ ಜನತೆ ಬಹುಮತದ ಮೂಲಕ ನಮಗೆ ಜವಾಬ್ದಾರಿ ನೀಡಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ಭಾಗವಹಿಸಿ. ಕಾಂಗ್ರೆಸ್ ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಬೇಕು. ಬಿಜೆಪಿಯವರು ಮಾಡುವ ಸುಳ್ಳು ಆರೋಪಗಳನ್ನು ಎದುರಿಸಬೇಕು.
ಕೇಂದ್ರದ ತಾರತಮ್ಯ ನೀತಿಯಿಂದ ರಾಜ್ಯದ ಜನತೆಗೆ ಅಪಾರ ನಷ್ಟವಾಗಿದೆ. ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ರಾಜ್ಯದ ಜನ ಕಟ್ಟುವ ತೆರಿಗೆಯಲ್ಲಿ ನಮ್ಮ ಪಾಲು ಸಮರ್ಪಕವಾಗಿ ಬರ್ತಿಲ್ಲ. ಒತ್ತಡ ಮತ್ತು ಬೇಡಿಕೆ ಮೂಲಕ ನಮ್ಮ ಪಾಲನ್ನು ಪಡೆದುಕೊಳ್ಳಬೇಕು. ಬಿಜೆಪಿ ಸಂಸದರು ನಾಡಿನ ಜನತೆಯ ಪರವಾಗಿ ಬಾಯಿ ಬಿಡಲಿಲ್ಲ. ಕೊವಿಡ್(covid), ಪ್ರವಾಹದ ಸಂದರ್ಭದಲ್ಲೂ ರಾಜ್ಯದ ಪರ ಬಾಯಿ ಬಿಡಲಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಉತ್ತರ ಕೊಡಬೇಕು. ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.