ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ 2ನೇ ಸುತ್ತಿನ ಸಂಪುಟ ರಚನೆ ಸರ್ಕಸ್ ಶುರುವಾಗಿದೆ. ಮೊದಲ ಹಂತದಲ್ಲಿ 8 ಶಾಸಕರು ಸಚಿವರಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಂಪುಟ ಸೇರಿದ್ದರು. ಇದೀಗ ಉಳಿದ ಸ್ಥಾನ ಭರ್ತಿ ಮಾಡಬೇಕಿದೆ. ಹೀಗಾಗಿ ಹೈಕಮಾಂಡ್ ಅಂಗಳದಲ್ಲಿ ಹೈವೋಲ್ಟೇಜ್ ಮೀಟಿಂಗ್ ಫಿಕ್ಸ್ ಆಗಿದ್ದು, ಇಂದೇ(ಮೇ 24) ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ.
ಈ ನಡುವೆ ಖಾತೆ ಹಂಚಿಕೆ ಸರ್ಕಸ್ ಜೋರಾಗೇ ನಡೆಯುತ್ತಿದೆ. ಬುಧವಾರದ ವೇಳೆಗೆ ಎಲ್ಲವೂ ಫೈನಲ್ ಆಗುತ್ತೆ. ಎಲ್ಲಾ ಸಚಿವ ಸ್ಥಾನ ಭರ್ತಿ ಆಗುತ್ತೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಡಿಕೆ ಶಿವಕುಮಾರ್ ಹೇಳಿಕೆಯಂತೆ ಸಂಪುಟ ಸರ್ಕಸ್ ಶುರುವಾಗಿದೆ. ಇವತ್ತು ಸಂಜೆ 6.30ಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ರಾತ್ರಿಯೇ ಹೈಕಮಾಂಡ್ ನಾಯಕರ ಜೊತೆ ಮೀಟಿಂಗ್ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವಿನ ಹಗ್ಗ-ಜಗ್ಗಾಟದಿಂದಾಗಿ ಮೊದಲ ಹಂತದಲ್ಲಿ ಕೇವಲ ಎಂಟು ಮಂದಿ ಮಾತ್ರ ಸಂಪುಟ ಸೇರ್ಪಡೆಯಾಗಿರುವುದರಿಂದ ಈ ಬಾರಿ ಕನಿಷ್ಠ 20 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅರ್ಹರ ಆಯ್ಕೆ ಬಗ್ಗೆ ಚರ್ಚಿಸಲು ಉಭಯ ನಾಯಕರು ದೆಹಲಿಗೆ ತೆರಳಲಿದ್ದು, ಮತ್ತೊಂದು ಸುತ್ತಿನ ಹೈವೋಲ್ಟೇಜ್ ಸರಣಿ ಸಭೆ ನಡೆಯುವ ನಿರೀಕ್ಷೆಯಿದೆ. ದೆಹಲಿಗೆ ತೆರಳುವ ಮುನ್ನವೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಣತಂತ್ರ ರೂಪಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ಗೌಪ್ಯ ಸ್ಥಳದಲ್ಲಿ ತಮ್ಮ ಆಪ್ತರಾದ ಬೈರತಿ ಸುರೇಶ್ ಹಾಗೂ ಕೆ.ಜೆ ಜಾರ್ಜ್ ಜೊತೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದ ಜತೆಗೆ ಉಭಯ ನಾಯಕರ ಆಪ್ತರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವೂ ಅಡಕವಾಗಿರುವುದರಿಂದ ಆಯ್ಕೆ ಕಗ್ಗಂಟಾಗುತ್ತಿದೆ. ಕಳೆದ ಬಾರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕೆಲ ನಿರ್ದಿಷ್ಟ ಹೆಸರುಗಳ ಬಗ್ಗೆ ಪಟ್ಟು ಹಿಡಿದಿದ್ದರಿಂದ 28 ಮಂದಿಯ ಬದಲಾಗಿ ಕೇವಲ 8 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ತೀರ್ಮಾನ ಮಾಡಲಾಗಿತ್ತು.
ಈ ಬಾರಿ ಇಂತಹ ಗೊಂದಲ ಉಂಟಾಗದಿರಲಿ ಎಂಬ ಕಾರಣಕ್ಕೆ ರಾಜ್ಯಕ್ಕೆ ಮಂಗಳವಾರವೇ ಆಗಮಿಸಿರುವ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಉಭಯ ನಾಯಕರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆ. ಇಷ್ಟಾಗಿಯೂ ಈ ಉಭಯ ನಾಯಕರು ತಮ್ಮದೇ ಆದ ಪಟ್ಟಿಯೊಂದಿಗೆ ಹೈಕಮಾಂಡ್ ಬಳಿ ತೆರಳುವುದು ಬಹುತೇಕ ಖಚಿತವಾಗಿದೆ. ಈ ಎರಡು ಪಟ್ಟಿಗಳ ಜತೆಗೆ ಹೈಕಮಾಂಡ್ ತನ್ನ ಬಯಕೆಯ ಕೆಲವರನ್ನು ಸೇರಿಸಿ ಅಂತಿಮ ಪಟ್ಟಿಸಿದ್ಧಪಡಿಸುವ ಅಗ್ನಿಪರೀಕ್ಷೆ ಎದುರಿಸಬೇಕಿದೆ