ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ವಯನಾಡ್ನಲ್ಲಿ ಉಳಿದರೆ ಉತ್ತರ ಪ್ರದೇಶದ ಅಮೇಠಿ ಸಂಸದರಾಗಿದ್ದಾಗ ಆದ ಗತಿಯೇ ಆಗಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ವಾಗ್ದಾಳಿ ನಡೆಸಿದ್ದಾರೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸುವ ಮೊದಲು ರಾಹುಲ್ ಗಾಂಧಿ ಅವರು ವಯನಾಡ್ (Wayanad )ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.
ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ನಾಯಕನ ಮನವಿಯ ತೀರ್ಪನ್ನು ಗುಜರಾತ್ ಹೈಕೋರ್ಟ್ ಕಾಯ್ದಿರಿಸಿದೆ. ತಿರುವನಂತಪುರಂನಲ್ಲಿ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಕೇರಳ ಘಟಕವು ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿಯನ್ನು ಅಮೇಠಿಯಿಂದ ಹೊರ ಕಳುಹಿಸಿದ ಅದೃಷ್ಟ ಹೊಂದಿದ್ದೇನೆ ಎಂದು ಹೇಳಿದರು.
ಅದಕ್ಕೆ ಕಾರಣ ಅವರು ಅಮೇಠಿಯ ಸಂಸದರಾಗಿದ್ದಾಗ ಅಲ್ಲಿನ ಶೇ.80 ರಷ್ಟು ಜನರಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ, ಜಿಲ್ಲಾಧಿಕಾರಿ ಕಚೇರಿ, ಅಗ್ನಿಶಾಮಕ ಸ್ಟೇಷನ್, ವೈದ್ಯಕೀಯ ಕಾಲೇಜು, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವಾಗಲಿ, ಎಕ್ಸ್ ರೇ ಯಂತ್ರವಾಗಲಿ ಇರಲಿಲ್ಲ. ಅವರು ಹೋದ ನಂತರ, ಈ ಎಲ್ಲಾ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ಅಲ್ಲಿ ಸಾಧ್ಯವಾಯಿತು. ಆದ್ದರಿಂದ, ಅವರು ವಯನಾಡಿನಲ್ಲಿ ಉಳಿದುಕೊಂಡರೆ, ಅಮೇಠಿಯಂತೆಯೇ ಇದೂ ಆಗಲಿದೆ. ಆದ್ದರಿಂದ, ಅವರು ಇಲ್ಲಿ ಉಳಿಯುವುದಿಲ್ಲ ಎಂದು ನೀವು (ಜನರು) ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹೇಳಿದ್ದಾರೆ.