ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ 1 ತಿಂಗಳಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಭಾನುವಾರ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನದ ಉದ್ಘಾಟಿಸಲಿದ್ದು, ಅದೇ ವೇಳೆಗೆ ಭವನದ ಎದುರು ‘ಮಹಾಪಂಚಾಯತ್’ ಹೆಸರಲ್ಲಿ ಬೃಹತ್ ಹೋರಾಟ ಸಂಘಟಿಸುವುದಾಗಿ ಈಗಾಗಲೇ ಕುಸ್ತಿಪಟುಗಳು ಘೋಷಿಸಿದ್ದಾರೆ.
ಇದರ ಭಾಗವಾಗಿ ಸ್ವತಃ ಭಜರಂಗ್ ಪೂನಿಯಾ, ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖರು ಹರಾರಯಣ, ಪಂಜಾಬ್ಗೆ ತೆರಳಿ ರೈತರು, ಮಹಿಳೆಯರಿಂದ ಬೆಂಬಲ ಕೋರಿದ್ದಾರೆ. ಅಲ್ಲದೇ ವಿವಿಧ ರಾಜ್ಯಗಳ ಸಾವಿರಾರು ಮಂದಿ ಈಗಾಗಲೇ ದೆಹಲಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ‘ಸಂಸತ್ ಭವನದ ಮುಂಭಾಗ ನಡೆಯಲಿರುವ ಮಹಾಪಂಚಾಯತ್ನಲ್ಲಿ ದೇಶದೆಲ್ಲೆಡೆಯ ಯುವಕ, ಯುವತಿಯರು ಪಾಲ್ಗೊಳ್ಳಬೇಕು. ಇದು ತ್ರಿವರ್ಣ ಧ್ವಜದ ಗೌರವ ಉಳಿಸುವುದಕ್ಕಾಗಿ ನಡೆಯಲಿರುವ ಹೋರಾಟ’ ಎಂದು ವಿನೇಶ್ ಕರೆ ನೀಡಿದ್ದಾರೆ.