ಬೆಂಗಳೂರು: ಮಾಜಿ ಸಚಿವ ಕೃಷ್ಣಭೈರೇಗೌಡ (Krishna Byre Gowda) ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿ ನಾಯಕರಾಗಿ ಬೆಳೆಯುತ್ತಿದ್ದು, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರು ಐದನೇ ಬಾರಿ ಗೆಲುವು ಸಾಧಿಸಿವ ಮೂಲಕ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. 2008ರಿಂದ ಸತತವಾಗಿ ಕಾಂಗ್ರೆಸ್ನ ಕೃಷ್ಣಭೈರೇಗೌಡ ಗೆಲುವು ಸಾಧಿಸುತ್ತಿದ್ದಾರೆ. ಇದೀಗ ಇವರು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಹಾಗಿದ್ದರೇ ಇವರು ನಡೆದು ಬಂದು ಹಾದಿ ಇಲ್ಲಿದೆ.
ತಂದೆ ಮಾಜಿ ಸಚಿವ ದಿವಂಗತ ಬೈರೇಗೌಡ, ತಾಯಿ ಸಾವಿತ್ರಮ್ಮ ಅವರ ಪುತ್ರನಾಗಿ ಕೃಷ್ಣಬೈರೇಗೌಡ ಎಪ್ರಿಲ್ 4 1973 ರಲ್ಲಿ ಬೆಂಗಳೂರಲ್ಲಿ ಜನಿಸಿದರು. ಪತ್ನಿ ಮೀನಾಕ್ಷಿ ಬೈರೇಗೌಡ. ಕೃಷ್ಣಬೈರೇಗೌಡ ಅವರು ನರಸಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿ, ಎಸ್ಎಸ್ಎಲ್ಸಿಯನ್ನು ಸತ್ಯಸಾಯಿ ಶಾಲೆ ಮುದ್ದೇನಹಳ್ಳಿಯಲ್ಲಿ ಪೂರ್ಣಗೊಳಿಸಿದರು. ನಂತರ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಗಿಸಿ, 1994 ರಲ್ಲಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ‘ವ್ಯವಹಾರ ನಿರ್ವಹಣೆ’ಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಅಮೆರಿಕಾದಲ್ಲಿ ಇಂಟರ್ನ್ಯಾಷನಲ್ ಅಫೇರ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಬಳಿಕ ಅಮೆರಿಕಾ ವಾಷಿಂಗ್ಟನ್ನಲ್ಲಿರುವ ಇಥಿಯೋಪಿಯಾ ರಾಜತಾಂತ್ರಿಕ ಕಚೇರಿಯಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಒಂದು ವರ್ಷ ಕೆಲಸ ಮಾಡಿದರು. ಇದಾದ ನಂತರ 2000 ದಿಂದ 2002ರ ಮಧ್ಯೆ ಕೋಲಾರದ ತಮ್ಮ ಜಮೀನಿನಲ್ಲಿ ಕೃಷಿಕರಾಗಿಯೂ ದುಡಿದಿದ್ದರು. ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿಗೆ ಆಪ್ತ ನಾಯಕರಲ್ಲಿ ಕೃಷ್ಣಬೈರೇಗೌಡರೂ ಒಬ್ಬರು. ಕೃಷ್ಣ ಬೈರೇಗೌಡರು ಕೃಷಿ ಭಾಗ್ಯ, ಜಲಾಮೃತ, ಸ್ವಚ್ಛ ಮೇವ ಜಯತೆ ಕೃತಿಗಳನ್ನೂ ಬರೆದಿದ್ದಾರೆ.
ರಾಜಕೀಯ ಜೀವನ ಆರಂಭ
2003ರಲ್ಲಿ ತಂದೆ ನಿಧನರಾದ ಬಳಿಕ ಅವರ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಥಮ ಬಾರಿಗೆ ಕೋಲಾರದ ವೇಮಗಲ್ ಕ್ಷೇತ್ರದಿಂದ ಗೆದ್ದು ಶಾಸಕರಾದರು.
2004ರಲ್ಲಿ ಅಖಿಲ ಭಾರತ ಪ್ರಗತಿಪರ ಜನತಾ ದಳ ಪಕ್ಷ ತೊರೆದು, ಕಾಂಗ್ರೆಸ್ ಸೇರಿ ಶಾಸಕರಾಗಿ ಪುನರಾಯ್ಕೆಗೊಂಡು ಮತ್ತೆ ವಿಧಾನಸಭೆ ಪ್ರವೇಶಿಸಿದರು.
2007ರಲ್ಲಿ ಕರ್ನಾಟಕದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 2008ರಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರು.
2009ರಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿ ಮೊದಲ ಬಾರಿಗೆ ಸೋಲು ಕಂಡರು.
2013 ರ ಚುನಾವಣೆಯಲ್ಲಿ ಮತ್ತೆ ಬ್ಯಾಟರಾಯನಪುರ ಕ್ಷೇತ್ರದಿಂದ ಗೆದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
2018ರಲ್ಲಿ ಬ್ಯಾಟರಾಯನಪುರದಿಂದ ಗೆಲುವು ಸಾಧಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಮೊತ್ತೊಮ್ಮೆ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಕೃಷ್ಣಬೈರೇಗೌಡರು ಒಟ್ಟು ಐದು ಬಾರಿ ಗೆದ್ದು ಶಾಸಕರಾಗಿದ್ದಾರೆ. ಬ್ಯಾಟರಾಯನಪುರದ ರಸ್ತೆ ಅಭಿವೃದ್ಧಿ, ಶಾಲೆ ನಿರ್ಮಾಣ ಹಾಗೂ ಬಡವರಿಗೆ ಮನೆನಿರ್ಮಾಣ ಮಾಡಿಕೊಟ್ಟು ಜನರ ನೆಚ್ಚಿನ ನಾಯಕರಾಗಿದ್ದಾರೆ.