ನವದೆಹಲಿ: ನೂತನ ಸಂಸತ್ ಭವನದ (New Parliament) ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಸನ್ಮಾನಿಸಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆಗೂ ಮುನ್ನ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾಂಪ್ರದಾಯಿಕ ಶಾಲು ಹೊದಿಸಿ ಸ್ಮರಣಿಕೆ ನೀಡಿ ಪುರಸ್ಕರಿಸಿದ್ದಾರೆ. ಸುಂದರವಾಗಿ ಕಟ್ಟಲ್ಪಟ್ಟಿರುವ ನೂತನ ಸಂಸತ್ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರವನ್ನು ಈ ಮೂಲಕ ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ದೇಶದ ಹಲವು ಕಡೆಯ ಶಿಲ್ಪಿಗಳು ಹಾಗೂ ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಅವರೆಲ್ಲರಿಗೂ ಸನ್ಮಾನಿಸುವ ಮೂಲಕ ಗೌರವ ಸೂಚಿಸಲಾಯಿತು. ಬಳಿಕ ಮುಂದಿನ ಕಾರ್ಯಕ್ರಮಕ್ಕೆ ಮೋದಿ ತೆರಳಿದ್ದಾರೆ. ಬಳಿಕ ಐತಿಹಾಸಿಕ ಸೆಂಗೋಲ್ (Sengol) ಅನ್ನು ಪ್ರಧಾನಿ ಮೋದಿ ಅವರು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿ, ದೀಪ ಬೆಳಗಿದರು. ಮಂತ್ರ-ವಾದ್ಯ ಘೋಷ, ಮಂಗಳವಾದ್ಯಗಳಿಂದ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು.