ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ತಮ್ಮ ಬಳಿ ಮಾತನಾಡಿದ್ದು, ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ಕೊಟ್ಟಿದ್ದಾರೆ. ಸಂಪುಟದಲ್ಲಿ ಪಂಚಮಸಾಲಿ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಅನ್ಯಾಯವಾಗಿಲ್ಲ ಎಂದರು.
ಸಂಪುಟಕ್ಕೆ ಸೇರ್ಪಡೆಯಾಗಬೇಕು ಎಂಬುದು ಕಾರ್ಯಕರ್ತರ ಹಾಗೂ ಸಮಾಜದ ಮುಖಂಡರ ಒತ್ತಾಸೆಯಾಗಿತ್ತು. ಅಂತಿಮವಾಗಿ ನಮ್ಮ ಒಲವು ನಿಲುವು ಏನೇ ಇದ್ದರೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಿರಬೇಕು ಎಂದರು. ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ಸಿಗುವ ಸಂಭವವಿತ್ತು. ದಿಲ್ಲಿಯಲ್ಲಿ ಕೊನೆ ಕ್ಷಣದವರೆಗೂ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆದರೆ ಕೊನೆ ಕ್ಷಣದಲ್ಲಿ ಬಿಟ್ಡು ಹೋಗಿದೆ. ಯಾವ ಕಾರಣಕ್ಕಾಗಿ ಹೀಗಾಯಿತು ಎಂಬುದರ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ವಿಜಯನಂದಾ ಕಾಶಪ್ಪನವರ್ ತಿಳಿಸಿದರು.