ಬೆಂಗಳೂರು: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಸಹೋದರಿ ವೈ. ಎಸ್. ಶರ್ಮಿಳಾ ರೆಡ್ಡಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. ಸದಾಶಿವನಗರದ ಗೃಹ ಕಚೇರಿಯಲ್ಲಿ ಭೇಟಿಯಾಗಿ ಶುಭ ಹಾರೈಸಿದರು. ಜಗನ್ ಮೋಹನ್ ರೆಡ್ಡಿ ಸಹೋದರಿ ವೈ. ಎಸ್. ಶರ್ಮಿಳಾ ರೆಡ್ಡಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ವೈ. ಎಸ್. ಆರ್. ತೆಲಂಗಾಣ ಪಕ್ಷದ ಸಂಸ್ಥಾಪಕರು ಅವರು. ಕೆ. ಚಂದ್ರಶೇಖರಾವ್ ಸರ್ಕಾರದ ವಿರುದ್ಧ ಹೋರಾಟಗಳನ್ನು ಮಾಡುವ ಮೂಲಕ ಈ ವರ್ಷ ನಡೆಯುವ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ, ಅವರ ಕುಟುಂಬ ರಾಜಕೀಯದ ಹೊರತಾಗಿಯೂ ಕರ್ನಾಟಕದ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಬೆಂಗಳೂರಿನಲ್ಲಿ ಐಷಾರಾಮಿ ಬಂಗಲೆಯನ್ನು ಜಗನ್ ಹೊಂದಿದ್ದಾರೆ. ರಾಜ್ಯದಲ್ಲಿ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ವೈ. ಎಸ್. ಶರ್ಮಿಳಾ ರೆಡ್ಡಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿಯಾಗಿ ಸೌಹಾರ್ದಯುತವಾಗಿ ಶುಭ ಕೋರಿದರು. ಡಿ. ಕೆ. ಶಿವಕುಮಾರ್ ಈ ಕುರಿತ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.