ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ. ನೀರಿಗಾಗಿ ಎಲ್ಲಿ ನೋಡಿದ್ರೂ ಹಾಹಾಕಾರ. ಹಲವಾರು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ರೆ ಈ ಊರಲ್ಲಿ ಮಾತ್ರ ಜನರು ಕೆರೆ ನೀರು ಖಾಲಿ ಮಾಡಿಸ್ತಿದ್ದಾರೆ. ಅರೇ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.. ಅಧಿಕಾರಿಗಳು ಬೇಡ ಬೇಡ ಅಂದ್ರೂ ಕೇಳದ ಜನ. ಕೆರೆಯಲ್ಲಿ ನೀರಿರೋದು ಬೇಡವೇ ಬೇಡ ಅನ್ನುತ್ತಿರೋ ಜನ. ಜನರ ಒತ್ತಡಕ್ಕೆ ಮಣಿದ ಗ್ರಾಮ ಪಂಚಾಯ್ತಿ ಅಧಿಕಾರಿಗಳು.
ಕೆರೆ ನೀರನ್ನು ಯಂತ್ರಗಳ ಮೂಲಕ ಹೊರ ಚಲ್ಲುತ್ತಿರುವ ಪಂಚಾಯತಿ. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮ. ಹೌದು.. ಕೆರೆಯಲ್ಲಿ ಬಿದ್ದು, ವ್ಯಕ್ತಿಯೋರ್ವನ ಆತ್ಮಹತ್ಯೆಯೇ ಇಷ್ಟಕ್ಕೆಲ್ಲಾ ಕಾರಣ. ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ನಡೆದಿರೋ ಘಟನೆಯಿಂದ ಈಗ ಕೆರೆಯ ನೀರನ್ನು ಖಾಲಿ ಮಾಡಿಸಲಾಗುತ್ತಿದೆ. 500 ಕ್ಕೂ ಹೆಚ್ಚು ಮನೆಗಳಿರೋ ಉಮಚಗಿ ಗ್ರಾಮದಲ್ಲಿ 3500 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರೋ ಗ್ರಾಮದಲ್ಲಿ ವ್ಯಕ್ತಿಯೋರ್ವನ ಆತ್ಮಹತ್ಯೆಯಿಂದ ಇಂತಹದೊಂದು ನಿರ್ಧಾರಕ್ಕೆ ಜನರು ಮುಂದಾಗಿದ್ದಾರೆ.
ಇನ್ನೂ ಮಲ್ಲಿಗವಾಡ ಗ್ರಾ.ಪಂ ವ್ಯಾಪ್ತಿಯಲ್ಲಿ ಬರೋ ಉಮಚಗಿ ಗ್ರಾಮಕ್ಕೆ ಹೊಂದಿಕೊಂಡಿರೋ ಕೆರೆಯಲ್ಲಿ ಸಾಲ ಬಾಧೆ ತಾಳದೆ ಶಂಕರಪ್ಪ ಹುರಳಿ ಎಂಬಾತನ ಆತ್ಮಹತ್ಯೆ ಮಾಡಿಕೊಂಡಿದ್ದ, ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನಗಳ ನಂತರ ಕೆರೆಯಲ್ಲಿ ತೇಲಿದ್ದ ಶವ ಕೊಳೆತ ಸ್ಥಿತಿಯಲ್ಲಿ, ಮೀನುಗಳು ತಿಂದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು. ಇದರಿಂದಾಗಿ ನೀರು ಕಲುಷಿತಗೊಂಡಿದೆ ಎನ್ನುತ್ತಿರೋ ಜನ. ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೀರು ಕಲುಷಿತಗೊಂಡಿಲ್ಲ ಅಂದ್ರೂ ಕೇಳದ ಜನ ಕೆರೆ ನೀರನ್ನು ಖಾಲಿ ಮಾಡಿಸುವಂತೆ ಪಟ್ಟು ಹಿಡಿದಿದ್ದಾರೆ.
ಒಟ್ಟಿನಲ್ಲಿ ಗ್ರಾಮಸ್ಥರ ಪಟ್ಟಿಗೆ ಮಣಿದ ಗ್ರಾಮ ಪಂಚಾಯಿತಿ ಯಂತ್ರಗಳ ಮೂಲಕ ಹಗಲು- ರಾತ್ರಿ ನೀರು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ಐದಾರು ದಿನಗಳ ನಂತರ ಕೆರೆ ಸಂಪೂರ್ಣ ಖಾಲಿಯಾಗೋ ನಿರೀಕ್ಷೆಯಿದೆ. ಸತ್ತವನ ಅನಿಷ್ಟದಿಂದಾಗಿ ಕೆರೆ ಕಲುಷಿತಗೊಂಡಿದೆ. ಬೇರೆ ಊರಿಗೆ ಹೋಗಿ ನೀರು ತಂದರೂ ಪರವಾಗಿಲ್ಲ. ನೀರು ಖಾಲಿ ಮಾಡಿಸಲೇ ಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿರುವುದು ವಿಪರ್ಯಾಸಕರ ಸಂಗತಿಯಾಗಿದೆ.