ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ವರ್ಷಗಳೆ ಕಳೆದು ಹೋಗಿದೆ. ಆದರೆ ಇಂದಿಗೂ ಪ್ರತಿಯೊಬ್ಬರ ಜೀವನದಲ್ಲೂ ಅಪ್ಪು ಅಜರಾಮರವಾಗಿದ್ದಾರೆ. ಪುನೀತ್ ಅಗಲಿಕೆ ಬಳಿಕ ರಾಜ್ಯದಾದ್ಯಂತ ಬೀದಿ ಬೀದಿಯಲ್ಲಿ ಅವರ ಕಟೌಟ್ಗಳು ರಾರಾಜಿಸಿವೆ. ಪುತ್ಥಳಿಗಳ ಉದ್ಘಾಟನೆ ಆಗಿದೆ. ಕೆಲವರು ದೇವಾಲಯಗಳನ್ನು ಕಟ್ಟಿದ್ದಾರೆ. ಇದೀಗ ಪುನೀತ್ ರಾಜ್ ಕುಮಾರ್ ಸಹೋದರ ರಾಘವೇಂದ್ರ ರಾಜ್ ಕುಮಾರ್ ಅಪ್ಪು ಹೆಸರನ್ನು ಹೃದಯದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಅಪ್ಪು ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿರುವ ರಾಘವೇಂದ್ರ ರಾಜ್ಕುಮಾರ್, ಅಪ್ಪು ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿದ್ದ ಅವರ ಅಭಿಮಾನಿಗಳಿಗೆ, ಅವರ ಕುಟುಂಬದವರಿಗೆ ಆಪ್ತೇಷ್ಟರಿಗೆ ಸಾಂತ್ವಾನ ಹೇಳು ಕಾರ್ಯ ಮಾಡಿದರು. ಅದಾದ ನಂತರ ಅಪ್ಪು ಅಭಿಮಾನಿಗಳ ಗುಂಪಿನ ನಾಯಕನಂತೆ ಅಭಿಮಾನಿಗಳನ್ನು ಸರಿದಾರಿಯಲ್ಲಿ ನಡೆಸುವ ಪ್ರಯತ್ನವನ್ನು ರಾಘಣ್ಣ ಮಾಡುತ್ತಿದ್ದಾರೆ.
ಅಪ್ಪು ಅಭಿಮಾನಿ ಆಗಿರುವ ರಾಘವೇಂದ್ರ ರಾಜ್ಕುಮಾರ್, ಪ್ರತಿದಿನವೂ ಅಪ್ಪುವಿನ ಭಾವಚಿತ್ರವನ್ನು ಶರ್ಟ್ಗೆ ಸಿಕ್ಕಿಸಿಕೊಂಡು ಓಡಾಡುತ್ತಿದ್ದರು. ಯಾವುದೇ ಕಾರ್ಯಕ್ರಮಕ್ಕೆ ಹೋದರು ಎದೆಯ ಮೇಲೆ ಅಪ್ಪು ಚಿತ್ರವೊಂದು ಇದ್ದೇ ಇರುತ್ತಿತ್ತು. ಆದರೆ ಈಗ ರಾಘವೇಂದ್ರ ರಾಜ್ಕುಮಾರ್ ಅವರು ತಮ್ಮ ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ ಪುನೀತ್ ರಾಜ್ಕುಮಾರ್ ಹಾಗೂ ಅವರ ಮಕ್ಕಳ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಅಪ್ಪು, ಟೊಟೊ ಮತ್ತು ನುಕ್ಕಿ ಎಂದು ಮೂರು ಹೆಸರುಗಳನ್ನು ರಾಘವೇಂದ್ರ ರಾಜ್ಕುಮಾರ್ ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿರುವ ರಾಘವೇಂದ್ರ ರಾಜ್ಕುಮಾರ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ತಮಗೆ ಹಚ್ಚೆ ಹಾಕಿದ ಯುವ ಟ್ಯಾಟೂ ಆರ್ಟಿಸ್ಟ್ ಜೊತೆಗೂ ರಾಘವೇಂದ್ರ ರಾಜ್ಕುಮಾರ್ ಫೊಟೊ ತೆಗೆಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ ಹಾಗೂ ಅವರ ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ಅವರ ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಕೊಂಡಾಡಿದ್ದಾರೆ. ಅಂದಹಾಗೆ, ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ನಿಕ್ ನೇಮ್ ಆಗಿದೆ.