ಕನ್ನಡದ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಒಂದಲ್ಲ ಒಂದು ಕಾರಣಕ್ಕೆ ನಿತ್ಯ ಸುದ್ದಿಯಲ್ಲಿರುತ್ತಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ ಪೆಳ್ಳಿ ಸಂದಡಿ ಸಿನಿಮಾ ಬಿಡುಗಡೆ ಆದ ಬಳಿಕ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಮತ್ತು ಸತಿ ಪತಿಗಳಂತೆಯೇ ಬದುಕುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಇದೀಗ ತೆಲುಗಿನ ಮಾಧ್ಯಮವೊಂದು ಈ ಇಬ್ಬರಿಗೂ ಮಕ್ಕಳು ಹೊಂದುವ ಕುರಿತು ಪ್ರಶ್ನೆ ಮಾಡಿದ್ದು ಈ ಬಗ್ಗೆ ಈ ಜೋಡಿ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.
ಈಗಾಗಲೇ ನಟಿ ಪವಿತ್ರಾ ಲೋಕೇಶ್ ಗೆ ಎರಡು ಮಕ್ಕಳಿದ್ದು, ನರೇಶ್ ಗೆ ಒಂದು ಮಗು ಇದೆ. ಇಬ್ಬರು ಮಗು ಹೊಂದುವ ಪ್ರಶ್ನೆಗೆ ಉತ್ತರಿಸಿರುವ ನರೇಶ್, ‘ದೈಹಿಕವಾಗಿ ಮಗು ಮಾಡಿಕೊಳ್ಳುವಂತಹ ಸಾಮರ್ಥ್ಯ ಇಬ್ಬರಿಗೂ ಇದೆ. ಆದರೆ, ಮಗು ಹೊಂದುವುದೇ ಜೀವನವಲ್ಲ. ನಮಗಾಗಿ ಈಗಾಗಲೇ ಮಕ್ಕಳು ಕಾದಿವೆ’ ಎಂದು ಭಾವನಾತ್ಮಕವಾಗಿ ಉತ್ತರಿಸಿದ್ದಾರೆ.
ಮಗುವಿನ ವಿಚಾರವನ್ನು ಮಾತನಾಡಲು ಮೊದಲು ಪವಿತ್ರಾ ಲೋಕೇಶ್ ನಿರಾಕರಿಸಿದರೂ ನಂತರ, ‘ಈಗಾಗಲೇ ಸಮಾಜದಲ್ಲಿ ತಂದೆ ತಾಯಿ ಇಲ್ಲದ ಸಾಕಷ್ಟು ಮಕ್ಕಳಿವೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಪಡೆಯುವ ಮೂಲಕ ಸಮಾಜಕ್ಕೆ ಸಂದೇಶ ನೀಡುವುದರಲ್ಲಿ ಏನಿದೆ? ನಾವು ಜೋಡಿಯಾಗಿ ಮಾಡುವ ಕೆಲಸ ಸಾಕಷ್ಟಿವೆ. ಅವುಗಳನ್ನು ಮಾಡುತ್ತೇವೆ’ ಎಂದಿದ್ದಾರೆ.
ರಿಲೇಷನ್ ಶಿಪ್, ಮದುವೆ, ಜೀವನ ಎಲ್ಲದರ ಬಗ್ಗೆಯೂ ಮಾಧ್ಯಮಗಳ ಮುಂದೆ ಇಬ್ಬರೂ ಮಾತನಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಮಕ್ಕಳನ್ನು ಮಾಡಿಕೊಳ್ಳುವಂತಹ ಯೋಚನೆ ಇಲ್ಲವೆಂದೂ ಹೇಳಿಕೊಂಡಿದ್ದಾರೆ. ಈಗೇನಾದರೂ ಮಕ್ಕಳನ್ನು ಹೊಂದಿದರೆ, ಅವರು 20 ವರ್ಷಕ್ಕೆ ಕಾಲಿಡುವಾಗ ನಾವು 60 ದಾಟಿರುತ್ತೇವೆ ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ.