ಬೆಳಗಾವಿ: ಚುನಾವಣೆಯಲ್ಲಿ ಮನೆಮನೆಗೆ ಗ್ಯಾರಂಟಿ ಕಾರ್ಡ್ (Guarantee Card) ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ನಿರ್ಗತಿಕರು, ಬಡವರು ಯಾರಿದ್ದಾರೆ ಅವರನ್ನು ಗುರುತಿಸಿ ಗ್ಯಾರಂಟಿ ಯೋಜನೆ ತಲುಪಿಸುತ್ತೇವೆ ಎಂದು ನೂತನ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಬಹಳಷ್ಟು ನಿರೀಕ್ಷೆಗಳನ್ನು ನಮ್ಮ ಸರ್ಕಾರದ ಮೇಲೆ ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ನಾವು ಗ್ಯಾರಂಟಿ ಈಡೇರಿಸಲು ಸಿದ್ಧರಿದ್ದೇವೆ. ಆದರೆ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಗ್ಯಾರಂಟಿ ನೀಡಿದ್ದು ನಾವು, ಅವರಲ್ಲ.
ಗ್ಯಾರಂಟಿ ಯೋಜನೆ ಈಡೇರಿಸಲು ಸಮಯ ಬೇಕು. ಯೋಜನೆ ಜಾರಿಗಾಗಿ ಈಗಾಗಲೇ ಸಿದ್ಧತೆ ನಡೆದಿವೆ. ನಾವು ಜಾರಿಗೊಳಿಸುತ್ತೇವೆ ಎಂದರು. ಸ್ವಾಮೀಜಿಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯಲು ಬೈಲೂರು ಮಠಕ್ಕೆ ಬಂದಿರುವೆ. ನಿಜಗುಣಾನಂದ ಸ್ವಾಮೀಜಿ ಹಾಗೂ ನಮ್ಮ ಹೋರಾಟ ಒಂದೇ ಇದೆ. ಸ್ವಾಮೀಜಿಗಳ ಜೊತೆಗೂಡಿ ಮೌಢ್ಯದ ವಿರುದ್ಧ ಹೋರಾಟ ಮಾಡಿದ್ದೇವೆ. ಸ್ವಾಮೀಜಿಗೆ ಮತ್ತಷ್ಟು ಶಕ್ತಿ ತುಂಬಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.