ಬೆಂಗಳೂರು: ಅನರ್ಹರಿಗೆ BPL ಕಾರ್ಡ್ ಮಾಡಿಕೊಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಎನ್.ಆರ್ ರಮೇಶ್ ಆಗ್ರಹಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸಿಎಂ ಗೆ ಪತ್ರ ಬರೆದಿರುವ ಅವರು, ದಿನಾಂಕ 14/05/2023 ರಿಂದೀಚೆಗೆ ಕರ್ನಾಟಕ ರಾಜ್ಯಾದ್ಯಂತ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಕುಟುಂಬದವರೂ ಸಹ BPL ಕಾರ್ಡುಗಳನ್ನು ಮಾಡಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಿದ್ದು, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ / ನೌಕರರು ಪ್ರತಿಯೊಬ್ಬರಿಂದ ತಲಾ 05 ಸಾವಿರ ರೂಪಾಯಿಗಳಿಂದ 08 ಸಾವಿರ ರೂಪಾಯಿಗಳವರೆಗೆ ಹಣವನ್ನು ಪಡೆದು BPL ಕಾರ್ಡುಗಳನ್ನು ಮಾಡಿಕೊಟ್ಟಿರುವುದು / ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ದಿನಾಂಕ 14/05/2023 ರಿಂದೀಚೆಗೆ BPL ಕಾರ್ಡುಗಳನ್ನು ನೀಡಿರುವಂತಹ ದಾಖಲೆಗಳನ್ನು ತಾವು ಕೂಡಲೇ ಖುದ್ದಾಗಿ ಪರಿಶೀಲಿಸಿದರೆ ಇದರ ಬಗೆಗಿನ ಸತ್ಯಾಂಶ ತಮಗೆ ಅರಿವಾಗುತ್ತದೆ ಎಂದಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿರುವ 05 ಉಚಿತ ಯೋಜನೆಗಳನ್ನು ಪಡೆದುಕೊಳ್ಳಬೇಕೆಂಬ ದುರುದ್ದೇಶದಿಂದ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಜನರೂ ಸಹ ಆಹಾರ ಮತ್ತು,
ನಾಗರಿಕ ಸರಬರಾಜು ಇಲಾಖೆಯಲ್ಲಿರುವ ಭ್ರಷ್ಟ ಅಧಿಕಾರಿಗಳ ನೆರವಿನಿಂದ ಕಳೆದ 15 ದಿನಗಳಿಂದೀಚೆಗೆ ಸಹಸ್ರಾರು ಸಂಖ್ಯೆಯಲ್ಲಿ BPL ಕಾರ್ಡುಗಳನ್ನು ಪಡೆದಿರುತ್ತಾರೆ ಮತ್ತು ಪಡೆಯಲು ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರತಿಯೊಂದು ಕಛೇರಿಗಳ ಮುಂದೆಯೂ ಸಹ ನೂರಾರು ಸಂಖ್ಯೆಯಲ್ಲಿ ಜನರು ಸರತಿಯಲ್ಲಿ ನಿಂತಿರುವ ಬಗ್ಗೆಯೂ ಸಹ ತಾವು ತಿಳಿದುಕೊಳ್ಳಬಹುದಾಗಿರುತ್ತದೆ ಎಂದು ಹೇಳಿದ್ದಾರೆ.