ಬೆಂಗಳೂರು: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮನ ಮೇಲೆ ಮಹಿಳೆಯಿಂದ ಬಿಸಿ ನೀರು ಎರಚಿ ಬಿಯರ್ ಬಾಟಲ್ ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಕಾಲ್ಕಿತ್ತ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. 25ರ ರಾತ್ರಿ ಘಟನೆ ನಡೆದಿದ್ದು ಇಂದು ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಕೆಲಸಕ್ಕೆ ಬಂದಿದ್ದ ಕಲಬುರಗಿ ಜಿಲ್ಲೆಯ ಭೀಮಾಶಂಕರ ಆರ್ಯ ಹಾಗೂ ಮಹಿಳೆ ಪರಿಚಯವಾಗಿದ್ದು ಆ ನಂತರ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ, ಆ ಬಳಿಕ ಮಹಿಳೆಗೆ ಈ ಮೊದಲೇ ಮದುವೆಯಾಗಿದೆ ಎಂದು ತಿಳಿದ ಭೀಮಾಶಂಕರ ಮಹಿಳೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ಇದರಿಂದ ರೊಚ್ಚಿಗೆದ್ದ ಮಹಿಳೆ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರೂಮಿಗೆ ಕರೆಸಿಕೊಂಡು ಕುದಿ ಕುದಿ ಬಿಸಿ ನೀರು ಮೈ ಮೇಲೆ ಎರಚಿದ್ದಾಳೆ. ಇದರಿಂದ ಪ್ರಿಯಕರ ಭೀಮಾಶಂಕರ ಆರ್ಯಗೆ ಮೈಯೆಲ್ಲ ಸುಟ್ಟು ಬೊಕ್ಕೆ ರೀತಿ ಬಂದಿದೆ.
ಕಲಬುರಗಿ ಮೂಲದ ಭೀಮಾಶಂಕರ ಆರ್ಯ ಹಾಗೂ ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಮಹಿಳೆ ಬೆಂಗಳೂರಿನಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಅಲ್ಲದೇ ತಾನು ವಾಸವಿದ್ದ ಚಾಮರಾಜಪೇಟೆಯಲ್ಲಿನ ಬಾಡಿಗೆ ರೂಂ ಮಹಿಳೆಗೆ ಬಿಟ್ಟು ಕೊಟ್ಟಿದ್ದ. ಬಳಿಕ ಮಹಿಳೆಗೆ ಈ ಮೊದಲೇ ಮದುವೆಯಾಗಿದೆ ಎಂದು ತಿಳಿದ ಯುವಕ, ಆಕೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾನೆ.ಈ ನಡುವೆ ಬೇರೆ ಯುವತಿಯೊಂದಿಗೆ ಭೀಮಾಶಂಕರ ಮದುವೆಯಾಗಿ ಪುನಃ ಬೆಂಗಳೂರಿಗೆ ಬಂದಿದ್ದ.
ಭೀಮಶಂಕರ್ ಮದುವೆಯಾಗಿರುವ ವಿಷಯ ಮಹಿಳೆಗೆ ಗೊತ್ತಾಗಿದ್ದು, ಮಾತನಾಡಬೇಕು ಎಂದು ಭೀಮಾಶಂಕರನನ್ನ ಮೇ 25ರಂದು ಮಹಿಳೆ ತನ್ನ ರೂಮಿಗೆ ಕರೆದಿದ್ದಾಳೆ. ಅದರಂತೆ ಭೀಮಾಶಂಕರ ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಹೋಗಿದ್ದಾನೆ. ಈ ವೇಳೆ ಮದುವೆಯಾದ ವಿಚಾರ ಪ್ರಸ್ತಾಪಿಸಿದ್ದಾನೆ. ಇದರಿಂದ ಕೋಪಗೊಂಡಿದ್ದ ಮಹಿಳೆ, ಸೈಲೆಂಟಾಗಿ ಬಿಸಿ ನೀರು ಕಾಯಿಸಿ ತಂದು ಭೀಮಾಶಂಕರನ ಮುಖಕ್ಕೆ ಎರಚಿದ್ದಾಳೆ.
ಅಲ್ಲದೇ ಬಿಯರ್ ಬಾಟಲ್ ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ನಂತರ ರೂಮಿನೊಳಗೆ ಭೀಮಾಶಂಕರ ತೀವ್ರ ಗಾಯಗೊಂಡು ಕಿರುಚಾಡುವುದನ್ನು ಮನೆ ಮಾಲೀಕ ಸೈಯದ್ ಕೇಳಿಸಿಕೊಂಡು ಓಡಿ ಹೋಗಿ ಭೀಮಶಂಕರನನ್ನು ರಕ್ಷಿಸಿ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಿದ್ದಾನೆ.
ಬಿಸಿ ನೀರು ಬಿದ್ದು ಶೇಕಡಾ 40-50 ರಷ್ಟು ಗಾಯಗಳಾಗಿದ್ದು, ಈ ಬಗ್ಗೆ ಭೀಮಾಶಂಕರ ಮಹಿಳೆ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಎಫ್ಐಆರ್ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರಿಂದ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.