ಬೆಂಗಳೂರು: ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳ ಜಾರಿಗೆ ಶೀಘ್ರದಲ್ಲೇ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆಯಲ್ಲಿ ಅನುಷ್ಠಾನ ಸಮಿತಿ ರಚಿಸುವುದಾಗಿ ತಿಳಿಸಿದ್ದೆವು,
ಇದೀಗ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದು, ಅನುಷ್ಠಾನ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆಂದು. ಸಮಿತಿ ರಚನೆಗೊಂಡರೆ ಅಲ್ಪಾವಧಿ ಮತ್ತು ದೀರ್ಘಾವಧಿ ಕಾಮಗಾರಿಗಳ ಅನುಷ್ಟಾನಕ್ಕೆ ಸಹಕಾರ ನೀಡಲಿದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಮಾತನಾಡಿ, ಸಚಿವ ಸಂಪುಟದಲ್ಲಿ ಚರ್ಚಿಸುವ ಮುನ್ನ ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಮಾತನಾಡುವುದನ್ನು ಬಿಟ್ಟುಬಿಡಬೇಕು. ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಭರವಸೆಗಳಿಗೆ ಸಂಪನ್ಮೂಲ ಕ್ರೋಢೀಕರಣದಂತಹ ಅಂಶಗಳನ್ನು ಸಂಪುಟದಲ್ಲಿ ವಿಸ್ತೃತವಾಗಿ ಚರ್ಚಿಸಬೇಕಿದೆ ಎಂದು ಹೇಳಿದರು.