ಅಹ್ಮದಾಬಾದ್ : ಕೊನೇ ಎಸೆತದವರೆಗೂ ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಫೈನಲ್ ಪಂದ್ಯದಲ್ಲಿ ಒತ್ತಡ ನಿಭಾಯಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ಎದುರು 5 ವಿಕೆಟ್ಗಳ ಜಯ ದಾಖಲಿಸಿ ದಾಖಲೆಯ 5ನೇ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಂತಿಮ 2 ಎಸೆತಗಳಲ್ಲಿ 10 ರನ್ಗಳ ಅಗತ್ಯವಿದ್ದಾಗ ಅನುಭವಿ ವೇಗದ ಬೌಲರ್ ಮೋಹಿತ್ ಶರ್ಮಾ ಎದುರು ಸಿಕ್ಸ್ ಮತ್ತು ಫೋರ್ ಬಾರಿಸಿದ ರವೀಂದ್ರ ಜಡೇಜಾ, ಸಿಎಸ್ಕೆ ಕೊರಳಿಗೆ ಜಯದ ಮಾಲೆ ತೊಡಿಸಿದರು.
ಐಪಿಎಲ್ ಆವೃತ್ತಿಯಲ್ಲಿ 4 ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಎಂ.ಎಸ್. ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಠ ಗುಜರಾತ್ ಟೈಟಾನ್ಸ್ಗೆ (GT) ಮಣ್ಣುಮುಕ್ಕಿಸಿ 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ 5 ಬಾರಿ ಐಪಿಎಲ್ ಕಪ್ ಗೆದ್ದ ಮುಂಬೈ ಇಂಡಿಯನ್ಸ್ ದಾಖಲೆಯನ್ನ ಸರಿಗಟ್ಟಿದೆ. ಗುಜರಾತ್ ಟೈಟಾನ್ಸ್ ತಾನು ಆಡಿದ 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ವಿಶೇಷವೆಂದರೆ ಚೆನ್ನೈ ತಂಡದಲ್ಲಿ ಸ್ಟಾರ್ ಆಟಗಾರನಾಗಿ ಮಿಂಚಿದ್ದ ಅಂಬಾಟಿ ರಾಯುಡು (Ambati Rayudu) ಗೆಲುವಿನೊಂದಿಗೆ ಐಪಿಎಲ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. 250 ಪಂದ್ಯವನ್ನಾಡಿದ ಸಾಧನೆ ಮಾಡಿದ ಎಂ.ಎಸ್ ಧೋನಿ ಸಹ ಇದೇ ಗೆಲುವಿನೊಂದಿಗೆ ವಿದಾಯ ಹೇಳುವ ಸಾಧ್ಯತೆಗಳಿವೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 214 ರನ್ ಗಳಿಸಿತ್ತು. ಚೇಸಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮೂರು ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಒಕ್ಕರಿಸಿತು. ಇದರಿಂದ ಸಿಎಸ್ಕೆ ಇನ್ನಿಂಗ್ಸ್ ಆರಂಭಗೊಳ್ಳುವುದು 1:30 ಗಂಟೆಗೂ ಅಧಿಕ ಕಾಲ ತಡವಾಯಿತು. 10:30ರ ವೇಳೆಗೆಲ್ಲಾ ಮಳೆ ಬಿಡುವುಕೊಟ್ಟರೂ ಮೈದಾನ ಹದಗೊಳಿಸುವುದಕ್ಕೆ 1 ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳಲಾಯಿತು. ಹಾಗಾಗಿ ತಡವಾಗಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮ ಅನ್ವಯಿಸಿ, ಓವರ್ಗಳನ್ನ ಕಡಿತಗೊಳಿಸಲಾಯಿತು. ಡಕ್ವರ್ತ್ ಲೂಯಿಸ್ (DSL) ನಿಯಮದ ಪ್ರಕಾರ 15 ಓವರ್ಗಳಲ್ಲಿ 171 ರನ್ ಟಾರ್ಗೆಟ್ ಪಡೆದು ಇನ್ನಿಂಗ್ಸ್ ಆರಂಭಿಸಿದ ಸಿಎಸ್ಕೆ 15 ಓವರ್ಗಳಲ್ಲಿ 171 ರನ್ ಚಚ್ಚುವ ಮೂಲಕ ಗೆಲುವು ಸಾಧಿಸಿತು.
ಕೊನೆಯ 20 ಎಸೆತಗಳಲ್ಲಿ 50 ರನ್ಗಳ ಅಗತ್ಯವಿತ್ತು. ಈ ವೇಳೆ ರಶೀದ್ ಖಾನ್ ಬೌಲಿಂಗ್ನ ಕೊನೆಯ ಎರಡು ಎಸೆತಗಳನ್ನು ಶಿವಂ ದುಬೆ (Shivam Dube) ಭರ್ಜರಿ ಸಿಕ್ಸರ್ ಬಾರಿಸಿದರು. ಇನ್ನೂ ಕೊನೆಯ 18 ಎಸೆತಗಳಲ್ಲಿ 38 ರನ್ಗಳು ಬೇಕಾಗಿದ್ದಾಗ ಕೊನೆಯ ಐಪಿಎಲ್ ಪಂದ್ಯವಾಡಿದ ಅಂಬಾಟಿ ರಾಯುಡು, ಮೋಹಿತ್ ಶರ್ಮಾ ಬೌಲಿಂಗ್ನ ಮೊದಲ ಮೂರು ಎಸೆತಗಳಲ್ಲಿ 2 ಸಿಕ್ಸರ್, 1 ಬೌಂಡರಿ ಬಾರಿಸಿದರು. ಇದರಿಂದ ಕಠಿಣ ಪರಿಸ್ಥಿತಿಯಲ್ಲಿದ್ದ ಚೆನ್ನೈಗೆ ಸಂಜೀವಿನಿ ಸಿಕ್ಕಂತಾಯಿತು. ಕೊನೆಯ 6 ಎಸೆತಗಳಲ್ಲಿ 13 ರನ್ ಅಗತ್ಯವಿದ್ದಾಗ ಮತ್ತೆ ಮೋಹಿತ್ ಶರ್ಮಾ ಬೌಲಿಂಗ್ನಲ್ಲಿದ್ದರು. ಮೊದಲ 4 ಎಸೆತಗಳಲ್ಲಿ ಕೇವಲ 3 ರನ್ ಸೇರ್ಪಡೆಯಾಯಿತು. 5ನೇ ಎಸೆತದಲ್ಲಿ ಸಿಕ್ಸ್ ಬಾರಿಸಿದ ಜಡೇಜಾ 6ನೇ ಎಸೆತದಲ್ಲಿ ಬೌಂಡರಿ ಚಚ್ಚುವ ಮೂಲ ಗೆಲುವು ತಂದುಕೊಟ್ಟರು.
ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ಡಿವೋನ್ ಕಾನ್ವೆ ಆರಂಭದಿಂದಲೇ ಗುಜರಾತ್ ಬೌಲರ್ಗಳನ್ನ ಬೆಂಡೆತ್ತಲು ಶುರು ಮಾಡಿತು. ಮೊದಲ ವಿಕೆಟ್ಕೆ ಈ ಜೋಡಿ 6.3 ಓವರ್ಗಳಲ್ಲಿ ಭರ್ಜರಿ 74 ರನ್ ಸಿಡಿಸಿತ್ತು. ಈ ವೇಳೆ ಋತುರಾಜ್ ಗಾಯಕ್ವಾಡ್ ದೊಡ್ಡ ಹೊಡೆತ ಹೊಡೆಯಲು ಯತ್ನಿಸಿ ಕ್ಯಾಚ್ ನೀಡಿ ಔಟಾದರು. ಋತುರಾಜ್ 16 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ನೊಂದಿಗೆ 26 ರನ್ ಗಳಿಸಿ ಪೆವಿಲಿಯನ್ ಸೇರುತ್ತಿದ್ದಂತೆ ಡಿವೋನ್ ಕಾನ್ವೆ ಸಹ 47 ರನ್ (25 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದರು. ನಂತರದಲ್ಲಿ ಕಣಕ್ಕಿಳಿದ ಅಜಿಂಕ್ಯಾ ರಹಾನೆ 13 ಎಸೆತಗಳಲ್ಲಿ ಸ್ಫೋಟಕ 27 ರನ್ (2 ಸಿಕ್ಸರ್, 2 ಬೌಂಡರಿ) ಚಚ್ಚಿ ಔಟಾದರು. ಅಂಬಾಟಿ ರಾಯುಡು 19 ರನ್ (8 ಎಸೆತ, 2 ಸಿಕ್ಸರ್, 1 ಬೌಂಡರಿ) ಚಚ್ಚಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಂ ದುಬೆ ಅಜೇಯ 32 ರನ್ (21 ಎಸೆತ, 2 ಸಿಕ್ಸ್), ರವೀಂದ್ರ ಜಡೇಜಾ 15 ರನ್ (6 ಎಸೆತ, 1 ಸಿಕ್ಸ್, 1 ಬೌಂಡರಿ) ಗಳಿಸಿ ಕ್ರೀಸ್ನಲ್ಲಿ ಉಳಿದರು.
ಆರಂಭಿಕರಾಗಿ ಕಣಕ್ಕಿಳಿದ ಶುಭಮನ್ ಗಿಲ್ ಹಾಗೂ ವೃದ್ಧಿಮಾನ್ ಸಾಹಾ ಜೋಡಿ ಉತ್ತಮ ಆರಂಭ ನೀಡಿತ್ತು. ಮೊದಲ ವಿಕೆಟ್ ಜೊತೆಯಾಟಕ್ಕೆ 42 ಎಸೆತಗಳಲ್ಲಿ 67 ರನ್ ಗಳಿಸಿತ್ತು. 2ನೇ ಓವರ್ನಲ್ಲೇ ಕ್ಯಾಚ್ ನಿಂದ ತಪ್ಪಿಸಿಕೊಂಡಿದ್ದ ಗಿಲ್ ಧೋನಿ ಮ್ಯಾಜಿಕ್ ಸ್ಟಂಪ್ಗೆ ವಿಕೆಟ್ ಒಪ್ಪಿಸಲೇಬೇಕಾಯಿತು. ನಂತರ ಕಣಕ್ಕಿಳಿದ ಆಟಗಾರರು ಚೆನ್ನೈ ಬೌಲರ್ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು.
ಗುಜರಾತ್ ಟೈಟಾನ್ಸ್ ಪರ ವೃದ್ಧಿಮಾನ್ ಸಾಹಾ 54 ರನ್ (39 ಎಸೆತ, 5 ಬೌಂಡರಿ, 1 ಸಿಕ್ಸರ್), ಶುಭಮನ್ ಗಿಲ್ 39 ರನ್ (20 ಎಸೆತ, 7 ಬೌಂಡರಿ), ಹಾರ್ದಿಕ್ ಪಾಂಡ್ಯ 21 ರನ್ ಗಳಿಸಿದರು. ಇನ್ನೂ 204.25 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಸಾಯಿ ಸುದರ್ಶನ್ 47 ಎಸೆತಗಳಲ್ಲಿ 96 ರನ್ (6 ಸಿಕ್ಸರ್, 8 ಬೌಂಡರಿ) ಸಿಡಿಸಿ ಶತಕ ವಂಚಿತರಾದರು.