ಅಹಮದಾಬಾದ್: ಐಪಿಎಲ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲು ಇದು ಅತ್ಯುತ್ತಮ ಸಮಯವಾಗಿದೆ. ಆದರೆ, ಅಭಿಮಾನಿಗಳು ನನ್ನ ಮೇಲೆ ತೋರಿದ ಪ್ರೀತಿ ಹಾಗೂ ವಾತ್ಸಲ್ಯದಿಂದ ಮತ್ತೊಂದು ಆವೃತ್ತಿಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ಇದಕ್ಕಾಗಿ 9 ತಿಂಗಳುಗಳ ಕಾಲ ಕಠಿಣ ಪರಿಶ್ರಮ ಪಡುತ್ತನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ತಿಳಿಸಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ಫೈನಲ್ ಪಂದ್ಯದ ಮೂಲಕ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡಿದೆ.
ಮೇ 28 ನಡೆಯಬೇಕಿದ್ದ ಈ ಪಂದ್ಯ ವಿಪರೀತ ಮಳೆ ಬಂದ ಕಾರಣ ರದ್ದಾಗಿ ನಿನ್ನೆಯ ರಿಸರ್ವ್ ಡೇಗೆ ಮುಂದೂಡಲ್ಪಟ್ಟಿತ್ತು. ಆದರೆ ಈ ರಿಸರ್ವ್ ಡೇ ದಿನದಂದೂ ಸಹ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿತ್ತು. ವಿಪರೀತ ಮಳೆ ಬಂದ ಕಾರಣ 20 ಓವರ್ಗಳ ಪಂದ್ಯ 15 ಓವರ್ಗೆ ಕುಸಿತ ಕಂಡಿತ್ತು. ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಗೆಲುವಿನ ಬಳಿಕ ಮಾತನಾಡಿದ ಎಂಎಸ್ ಧೋನಿ, “ನಿವೃತ್ತಿ ಬಗೆಗಿನ ಉತ್ತರಕ್ಕಾಗಿ ಕಾಯುತ್ತಿದ್ದೀರಾ? ಸಾಂದರ್ಭಿಕವಾಗಿ ನೋಡಿದರೆ, ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ. ಆದರೆ, ಈ ವರ್ಷ ನಾನು ಎಲ್ಲೇ ಹೋದರೂ ನನ್ನ ಮೇಲೆ ತೋರಿದ ಪ್ರೀತಿ ಮತ್ತು ವಾತ್ಸಲ್ಯ ಅದ್ಭುತವಾಗಿತ್ತು. “ತುಂಬಾ ಧನ್ಯವಾದಗಳು” ಎಂದು ಹೇಳುವುದು ಸುಲಭ, ಆದರೆ ನನಗೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಠಿಣ ಪರಿಶ್ರಮ ಪಟ್ಟು ಮರಳುವುದು ಹಾಗೂ ಕನಿಷ್ಠ ಒಂದು ಆವೃತ್ತಿಯನ್ನು ಆಡುವುದು. ಇದೆಲ್ಲಾ ಸಂಗತಿಗಳು ನನ್ನ ದೇಹವನ್ನು ಅವಲಂಬಿಸಿರುತ್ತದೆ. ಮುಂದಿನ 6 ರಿಂದ 7 ತಿಂಗಳುಗಳ ಅವಧಿಯಲ್ಲಿ ಈ ವಿಷಯವನ್ನು ಅಂತಿಮಗೊಳಿಸುತ್ತೇನೆ. ಇನ್ನೊಂದು ಆವೃತ್ತಿ ಆಡಲು ಬಯಸುತ್ತಿರುವುದು ನನ್ನ ಕಡೆಯಿಂದ ನೀಡುತ್ತಿರುವ ಉಡುಗೊರೆ, ಆದರೆ ಇದು ಸುಲಭವಲ್ಲ. ನನ್ನ ಮೇಲೆ ತೋರಿದ ಪ್ರೀತಿ ಹಾಗೂ ವಾತ್ಸಲ್ಯಕ್ಕಾಗಿ ಎಲ್ಲರಿಗಾಗಿ ಈ ಕೆಲಸವನ್ನು ನಾನು ಮಾಡಬೇಕಾಗಿದೆ,” ಎಂದು ಭಾವುಕರಾದರು.
“ಇದು ನನ್ನ ವೃತ್ತಿ ಜೀವನದ ಅಂತಿಮ ಘಟ್ಟವಾಗಿದ್ದರಿಂದ ನೀವು ಭಾವುಕರಾಗಿದ್ದೀರಿ. ಇಲ್ಲಿ ಮೊದಲ ಪಂದ್ಯವಾಡಿದ ದಿನ ನಾನು ಅಂಗಣಕ್ಕೆ ಆಗಮಿಸುತ್ತಿದ್ದಾಗ ಎಲ್ಲರೂ ಧೋನಿ… ಧೋನಿ ಎಂದು ನನ್ನ ಹೆಸರು ಕೂಗುತ್ತಿದ್ದರು. ಈ ವೇಳೆ ನನ್ನ ಕಣ್ಣಲ್ಲಿ ನೀರು ತುಂಬಿತ್ತು ಹಾಗೂ ಡಗೌಟ್ನಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದೆ. ಇದನ್ನು ಆನಂದಿಸಬೇಕೆಂದು ನನಗೆ ಮನವರಿಕೆಯಾಯಿತು. ಚೆನ್ನೈನಲ್ಲಿಯೂ ಇದೇ ರೀತಿ ಆಯಿತು. ಮತ್ತೆ ಕಮ್ಬ್ಯಾಕ್ ಮಾಡಿ ಆಡಲು ಬಯಸುತ್ತೇನೆ. ನಾನು ಹೇಗಿದ್ದರೂ ಅವರು ನನ್ನನ್ನು ಪ್ರೀತಿಸುತ್ತಾರೆ,” ಎಂದು ಎಂಎಸ್ ಧೋನಿ ಹೇಳಿದ್ದಾರೆ.