ರಾಂಚಿ: ಕಳ್ಳನೊಬ್ಬ (Thief) ಮಹಿಳೆಯ ಕತ್ತಿನಿಂದ ಚಿನ್ನದ ಸರ (Gold Chain) ಕದ್ದು ಪರಾರಿಯಾಗುವಾಗ ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಸರ ನುಂಗಿ ಅದು ಗಂಟಲಲ್ಲಿ ಸಿಲುಕಿ ನರಳಾಡಿದ ಘಟನೆ ಜಾರ್ಖಂಡ್ನ (Jharkhand) ರಾಂಚಿಯಲ್ಲಿ (Ranchi) ನಡೆದಿದೆ. ಡೊರಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ದುಬಾದಿ ಸೇತುವೆ ಬಳಿ ಸಲ್ಮಾನ್ ಮತ್ತು ಜಾಫರ್ ಎಂಬ ಇಬ್ಬರು ಕಳ್ಳರು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ.
ಸರ ಕಸಿದುಕೊಂಡ ನಂತರ ಇಬ್ಬರು ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಪೊಲೀಸರು ಕಳ್ಳರನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಸಲ್ಮಾನ್ ಸರವನ್ನು ನುಂಗಿದ್ದಾನೆ. ಇದನ್ನು ಪೊಲೀಸರು ನೋಡಿದ್ದು ನುಂಗದಂತೆ ಕೂಗಿ ಹೇಳಿದ್ದಾರೆ. ಬಳಿಕ ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಸಲ್ಮಾನ್ ಮತ್ತು ಜಾಫರ್ನನ್ನು ಬಂಧಿಸಿದ್ದಾರೆ.
ಈ ವೇಳೆ ಗಂಟಲಿನ ಕೆಳಭಾಗದಲ್ಲಿ ಚೈನ್ ಸಿಲುಕಿಕೊಂಡು ಎದೆ ನೋವಿನಿಂದ ಸಲ್ಮಾನ್ ನರಳಾಡಿದ್ದಾನೆ. ತಕ್ಷಣವೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಕ್ಸ್ ರೇ ಮೂಲಕ ಆರೋಪಿಯ ಎದೆಯಲ್ಲಿ ಸುರುಳಿಯಾಗಿ ಸಿಲುಕಿದ್ದ ಚಿನ್ನದ ಸರವನ್ನು ಪತ್ತೆ ಹಚ್ಚಿದ ವೈದ್ಯರು, ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಆರೋಪಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.