ದುಬೈ: ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮವು ಗಲ್ಫ್ ದೇಶಗಳಲ್ಲಿರುವ ಭಾರತೀಯರಿಗೆ ತಲೆನೋವು ಉಂಟು ಮಾಡಿದೆ.
ಭಾರತ ಸರ್ಕಾರದ ಈ ನೀತಿಯ ಕುರಿತು ಗಲ್ಫ್ ದೇಶದ ಬ್ಯಾಂಕ್ಗಳಿಗೆ ಯಾವುದೇ ಮಾಹಿತಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದ್ದು ಇದೇ ಕಾರಣದಿಂದಾಗಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ತೊಂದರೆ ಅನುಭವಿಸುವಂತಾಗಿದೆ ಎಂದು ಯುಎಇನಲ್ಲಿ ಇರುವ ಹಲವು ಭಾರತೀಯರು ಸಂಕಷ್ಟು ತೋಡಿಕೊಂಡಿದ್ದಾರೆ.
ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ ₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ. ಈ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ಗಳಿಗೆ ಜಮೆ ಅಥವಾ ವಿನಿಮಯ ಮಾಡಿಕೊಳ್ಳಬೇಕು. ಜೊತೆಗೆ, ಈ ನೋಟುಗಳನ್ನು ಗ್ರಾಹಕರಿಗೆ ನೀಡಬಾರದು ಎಂದು ಬ್ಯಾಂಕ್ಗಳಿಗೂ ಸೂಚಿಸಿದೆ.
ಈ ನಡುವೆ ‘ಸೌದಿ ಅರೇಬಿಯಾದ ನೋಟು ವಿನಿಮಯ ಕೇಂದ್ರದಲ್ಲಿ ಭಾರತದ ಎರಡು ಸಾವಿರ ಮುಖಬೆಲೆಯ ನೋಟು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ನಾವು ಈಗ ರಜಾ ಅವಧಿಯ ಮಧ್ಯದಲ್ಲಿದ್ದೇವೆ. ಇಲ್ಲಿಗೆ ಭೇಟಿ ನೀಡಿರುವ ಹಲವರ ಬಳಿ ಎರಡು ಸಾವಿರ ರೂಪಾಯಿಯ ನೋಟಿನ ಕಂತೆಗಳಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ’ ಎಂದು ಎನ್ಆರ್ಐ ಉದ್ಯಮಿ ಚಂದ್ರಶೇಖರ್ ಭಾಟಿಯ ಹೇಳಿದರು.