ಗದಗ: ಜೂನ್ 1 ರಂದು ಕ್ಯಾಬಿನೆಟ್ ಸಭೆ ನಡೆಯಲಿದೆ. ಆ ಸಭೆ ಮೂಲಕ ಗ್ಯಾರಂಟಿ ಕಾರ್ಡ್ (Guarantee Card) ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡುತ್ತೇವೆ ಎಂದು ಸಚಿವ ಹೆಚ್ಕೆ ಪಾಟೀಲ್ (HK Patil) ಟಾಂಗ್ ನೀಡಿದ್ದಾರೆ. ನೂತನವಾಗಿ ಸಚಿವರಾದ ನಂತರ ಮೊದಲ ಬಾರಿಗೆ ಸ್ವಕ್ಷೇತ್ರ ಗದಗ (Gadag) ನಗರಕ್ಕೆ ಆಗಮಿಸಿದ ಹೆಚ್ಕೆ ಪಾಟೀಲ್ ನಗರ ಮುಳಗುಂದ ನಾಕಾದಿಂದ ಕಾಂಗ್ರೆಸ್ (Congress) ಕಚೇರಿ ವರೆಗೆ ಬೃಹತ್ ರ್ಯಾಲಿ ನಡೆಸಿದರು.
ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಹೂ ಎರಚಿ ಜೈಘೋಷ ಕೂಗಿ ಸಂಭ್ರಮಿಸಿದರು. ನಂತರ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಅವರ ತಂದೆ ಕೆಹೆಚ್ ಪಾಟೀಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂನ್ 1 ರಂದು ಕ್ಯಾಬಿನೆಟ್ ಸಭೆ ನಡೆಯಲಿದೆ. ಆ ಸಭೆ ಮೂಲಕ ಗ್ಯಾರಂಟಿ ಕಾರ್ಡ್ ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡುತ್ತೇವೆ.
ಗ್ಯಾರಂಟಿ ಕಾರ್ಡ್ಗಳ ಗೊಂದಲವಿದೆ ಎಂದು ಕೆಲವರು ಭಾವಿಸಿಕೊಳ್ಳುವವರಿದ್ದಾರೆ. ಅಂಥವರಿಗೆ ನಾನು ಏನನ್ನೂ ಹೇಳಲು ಬಯಸೋದಿಲ್ಲ. ಕ್ಯಾಬಿನೆಟ್ ಸಭೆಯಲ್ಲಿ ವಿವರವಾದ ಕ್ರಾಂತಿಕಾರಕ, ಬಹು ದೊಡ್ಡ ನಿರ್ಣಯವನ್ನು ಕೈಗೊಳ್ಳಲಿದ್ದೇವೆ ಎಂದರು. ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸ್ಥಾನ ನನಗೆ ನೀಡಿದ್ದಕ್ಕೆ ತೃಪ್ತಿ ತಂದಿದೆ. ಖಾತೆಗಳ ಬಗ್ಗೆ ಗೊತ್ತಿಲ್ಲದವರು ಏನಾದ್ರೂ ವ್ಯಾಖ್ಯಾನ ಮಾಡಬಹುದು. ಅದಕ್ಕೆ ನಮ್ಮ ಅಭ್ಯಂತರ ಏನಿಲ್ಲ. ಆದರೆ ಈಗಾಗಲೇ ಈ ಖಾತೆಯನ್ನು ಒಮ್ಮೆ ನಿರ್ವಹಿಸಿದ್ದೇನೆ. ಅದರ ಅನುಭವವಿದೆ ಎಂದು ತಿಳಿಸಿದರು.