ತುಮಕೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಇಂದು (ಮಂಗಳವಾರ) ಸಿದ್ದಗಂಗಾ ಮಠ (Siddaganga Mutt Tumakuru) ಕ್ಕೆ ಭೇಟಿ ನೀಡಿದ್ದಾರೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಗಳ ಆಶೀರ್ವಾದ ಪಡೆದರು. ಬಳಿಕ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ಸಚಿವರು ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಸಿದ್ದಲಿಂಗ ಸ್ವಾಮೀಜಿಯವರು ಮಠದ ಅನುದಾನ ತಡೆಹಿಡಿದ ಬಗ್ಗೆ ವಸತಿ ಸಚಿವರ ಬಳಿ ಪ್ರಸ್ತಾಪ ಮಾಡಿದರು.
ಶ್ರೀ ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಆಗಿದೆ. ಇನ್ನೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಹಿಡಿದು ಬರುತ್ತಿದ್ದಾರೆ. ಆದರೆ ಕಟ್ಟಡ ಕೊರತೆಯಿಂದ ಅಡ್ಮಿಷನ್ ನಿಲ್ಲಿಸಲಾಗಿದೆ. ಹಿಂದಿನ ಸರ್ಕಾರ ಮಂಜೂರು ಮಾಡಿದ ಬಿಲ್ಡಿಂಗ್ ರೆಡಿಯಾದರೆ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ಸಚಿವರ ಬಳಿ ಶ್ರೀಗಳು ಹೇಳಿಕೊಂಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಂತ್ರಿ ಆದಾಗೆಲ್ಲ ಸಿದ್ದಗಂಗಾ ಮಠಕ್ಕೆ ಬಂದು ನಾನು ಆಶೀರ್ವಾದ ಪಡೆಯುತ್ತೇನೆ.
ಇಂದು ಕೂಡ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಓದಿಗೆ ಕಟ್ಟಡದ ಕೊರತೆಯಿದೆ. ಕೊರತೆ ಬಗ್ಗೆ ಶ್ರೀಗಳು ನನ್ನ ಗಮನಕ್ಕೆ ತಂದಿದ್ದಾರೆ. ಸರ್ಕಾರ ಸಿದ್ದಗಂಗಾ ಮಠದ ಅನುದಾನ ತಡೆ ಹಿಡಿದಿರುವ ಬಗ್ಗೆ ನಾನು ಸಿಎಂ ಗಮನಕ್ಕೆ ತರುತ್ತೇನೆ ಎಂದರು. ಅನುದಾನ ಮಂಜೂರು ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಐದು ಗ್ಯಾರಂಟಿಗಳು ಅನುಷ್ಠಾನ ಆಗೇ ಆಗುತ್ತದೆ. ಆದರೆ ಮಾಧ್ಯಮದವರು ತುಂಬಾ ಆತುರ ಪಡುತ್ತಿದ್ದಾರೆ. ಸಮಯಾವಕಾಶ ಪಡೆದು ನಾವು ಜಾರಿ ಮಾಡುತ್ತೇವೆ ಎಂದು ಜಮೀರ್ ಹೇಳಿದರು.