ಬೆಂಗಳೂರು: ಶಾಲಾ ಪಠ್ಯವನ್ನು ಹಂತಹಂತವಾಗಿ ಬದಲಾಯಿಸಲಾಗುತ್ತದೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಅಂಶಗಳಿರುವ ಪಠ್ಯಗಳಿಗಷ್ಟೇ ಹೆಚ್ಚು ಮಾನ್ಯತೆ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಮತ್ತೊಂದೆಡೆ, ಸಮಾನ ಮನಸ್ಕರ ಒಕ್ಕೂಟದಡಿ ಹಿರಿಯ ಸಾಹಿತಿಗಳು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಪಠ್ಯದಲ್ಲಿರುವ ಅವೈಜ್ಞಾನಿಕ ವಿಚಾರಗಳನ್ನು ತೆಗೆದುಹಾಕಿ ಮಕ್ಕಳ ಭವಿಷ್ಯಕ್ಕೆ ಅವಶ್ಯವಾಗಿರುವಂಥ ಅಂಶಗಳಿರುವ ಪಠ್ಯಗಳನ್ನು ಮಾತ್ರ ಉಳಿಸಿಕೊಳ್ಳಬೇಕೆಂದು ಮನವಿ ಸಲ್ಲಿಸಿದೆ.
ಇದರಿಂದಾಗಿ, ಮಧು ಬಂಗಾರಪ್ಪನವರು ಹುಷಾರಾಗಿ ಹೆಜ್ಜೆಯಿಡುವಂಥ ಪರಿಸ್ಥಿತಿಯಿದ್ದು ಅವರಿಗೆ ದೊಡ್ಡ ಸವಾಲಾಗಿ ಪರಿಗಣಿಮಿಸಿದೆ. ಮಧು ಬಂಗಾರಪ್ಪ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಪೂಜಾರಿ ಆಕ್ಷೇಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿದ್ದ ಬಿಜೆಪಿ ಸರ್ಕಾರ ಶಾಲಾ ಪಠ್ಯದ ವಿಚಾರದಲ್ಲಿ ಏನು ಮಾಡಿತ್ತು ಎಂಬುದರ ಬಗ್ಗೆ ಮಾತನಾಡಲು ಹೋಗಲ್ಲ. ಆದರೆ, ಈಗ ನಾವೇನು ಮಾಡಬಲ್ಲೆವು ಎಂಬುದನ್ನು ಮಾತ್ರ ಮಾತನಾಡುತ್ತೇನೆ ಎಂದರು.
“ಶಾಲಾ ಪಠ್ಯಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಕೆಲವಾರು ಸೂಚನೆಗಳನ್ನು ನೀಡಿದ್ದಾರೆ. ಅವೆಲ್ಲವನ್ನೂ ಜಾರಿಗೆ ತರುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ. ನಮ್ಮ ಸರ್ಕಾರ ಬರುವಷ್ಟರಲ್ಲಿ ಶಾಲೆಗಳು ಶುರುವಾಗಿವೆ. ಹಾಗಾಗಿ, ಎಲ್ಲವನ್ನೂ ಯೋಚಿಸಿ ಹಂತಹಂತವಾಗಿ ನಮ್ಮ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕಾಗುತ್ತೆ. ಹಾಗಾಗಿ, ಪಠ್ಯಗಳನ್ನು ಹಂತಹಂತವಾಗಿ ಪರಿಷ್ಕರಿಸಲು ನಿರ್ಧರಿಸಿದ್ದೇನೆ’’ ಎಂದು ಹೇಳಿದರು.
ಮಧು ಅವರ ಹೇಳಿಕೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪಿಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುವಂಥ ಪಠ್ಯವನ್ನು ನಾವು ಶಾಲಾ ಪಠ್ಯಕ್ರಮದಲ್ಲಿ ಸೇರಿಸಿದ್ದೆವು. ಆದರೆ, ಆ ಪಠ್ಯವನ್ನು ಪುನಃ ಪರಿಷ್ಕರಣೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಳೆಯ ಕಾಲದ ಶಿಕ್ಷಣಕ್ರಮದತ್ತ ಮುಖ ಮಾಡಿದೆ ಎಂದಿದ್ದಾರೆ. ಮತ್ತೊಂದೆಡೆ, ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬಿ.ಸಿ. ಪಾಟೀಲ್ ಕೂಡ ಪಠ್ಯಕ್ರಮ ಪರಿಷ್ಕರಣೆ ನಿರ್ಧಾರವನ್ನು ಆಕ್ಷೇಪಿಸಿದ್ದಾರೆ.