ಬೆಂಗಳೂರು : ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ಉಚಿತ ಪ್ರಯಾಣ ಅನುಷ್ಠಾನ ಕುರಿತು ಅಂತಿಮ ವರದಿ ಸಿದ್ದವಾಗಿದೆ. ಯಾವುದೇ ಕಂಡಿಷನ್ ಹಾಕದೇ ಎಲ್ಲಾ ಮಹಿಳೆಯರು ಅವಕಾಶ ನೀಡಲಾಗುವುದು. ಜೂನ್ 1 ರಂದು ಮುಖ್ಯಮಂತ್ರಿಗಳು ಅಧಿಕೃತ ಘೋಷಣೆ ಮಾಡಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಮಂಗಳವಾರ KSRTC ಮುಖ್ಯಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಬಗ್ಗೆ ಹಾಗೂ ಅದಕ್ಕೆ ತಗುಲುವ ವೆಚ್ಚದ ಬಗ್ಗೆ ವರದಿ ಸಿದ್ಧವಾಗಿದೆ. ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಲಾಗುವುದು. ಸಚಿವ ಸಂಪುಟ ಸಭೆಯ ಬಳಿಕ ಘೋಷಣೆ ಮಾಡಬಹುದು ” ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಿಪಿಎಲ್, ಎಪಿಎಲ್ ಅಂತಾ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಎಲ್ಲಾ ಮಹಿಳೆಯರಿಗೆ ಕೊಡುತ್ತೇವೆ. ಜೂನ್ 1 ರಂದು ಸಿಎಂ ಘೋಷಣೆ ಮಾಡಬಹುದು. ಈ ವಿಚಾರದಲ್ಲಿ ಬಿಜೆಪಿಯವರಿಗೆ ಹೋರಾಟ ಮಾಡೋಕೆ ಅವಕಾಶನೇ ಕೊಡಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಅಧಿಕಾರಿಗಳು ಮೂರ್ನಾಲ್ಕು ಆಯ್ಕೆಗಳನ್ನ ಕೊಟ್ಟಿದ್ದಾರೆ. ಎಲ್ಲಾ ಮಹಿಳೆಯರಿಗೆ ಉಚಿತ ಎನ್ನುವುದು ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಾಗಿತ್ತು. ನಾಳೆ ಸಚಿವ ಸಂಪುಟದಲ್ಲಿ ಸಾರಿಗೆ ಇಲಾಖೆ ವರದಿ ಕೊಡುತ್ತೇವೆ. ಉಚಿತ ಬಸ್ ಪ್ರಯಾಣ ಗ್ಯಾರಂಟಿ ಜಾರಿಗೆ ಬರುವುದರಲ್ಲಿ ಅನುಮಾನವೇ ಬೇಡ ಎಂದು ತಿಳಿಸಿದರು.