ಬೆಂಗಳೂರು: ನಿಗಮ ಮಂಡಳಿಯಲ್ಲಿ ಕೆಲಸ ಕೊಡಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿನ ಮೇಲೆ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಸದಾಶಿವ ನಗರ ಪೊಲೀಸರು, ಅರೆಸ್ಟ್ ಮಾಡಿ ತನಿಖೆ ಕೈಗೊಂಡಿದ್ದಾರೆ.
ಕೇಶವ್ ಮೂರ್ತಿ ಎಂಬುವವರು ದಾಖಲಿಸಿದ್ದ ದೂರು ಆಧರಿಸಿ, ಆರೋಪಿ ರಘುನಾಥ್ನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ರಘುನಾಥ್ ಎಂಬ ವ್ಯಕ್ತಿಯೋರ್ವ ಸಚಿವ ಪ್ರಿಯಾಂಕ್ ಖರ್ಗೆಯವರ ಪಿಎ ಎಂದು ಹೇಳಿಕೊಂಡು ನಿಗಮ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕೊಡಿಸ್ತೀನಿ ಎಂದು ನಂಬಿಸಿ ಜನರ ಬಳಿಯಿಂದ ಹಣ ಪೀಕುತ್ತಿದ್ದ. ಹಣ ಹಾಕಿದರೆ ಅಧ್ಯಕ್ಷ ಸ್ಥಾನ ಫಿಕ್ಸ್ ಎಂದು ಹೇಳಿ ಗೂಗಲ್ ಪೇ ಮಾಡಿಸಿಕೊಳ್ತಿದ್ದ. ಇನ್ನು ಈತ ಸಚಿವರ ಬಳಿ 10 ವರ್ಷದಿಂದ ಆಪ್ತ ಸಹಾಯಕನಾಗಿದ್ದೇನೆ ಎಂದು ಪರಿಚಯ ಮಾಡಿಕೊಂಡು ದುಡ್ಡು ಸುಲಿಗೆ ಮಾಡ್ತಿದ್ದ.
ಹೇಳುವಷ್ಟು ಹಣ ನೀಡದಿದ್ದರೆ ನಿಗಮ ಮಂಡಳಿಯಲ್ಲಿ ಮರ್ಯಾದಿನೇ ಇರಲ್ಲಾ, ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನ ಮಾನ ಸಿಗೋದಿಲ್ಲ ಅದಕ್ಕೆ ಹಣ ನೀಡಬೇಕೆಂದು ಬೆದರಿಕೆ ಹಾಕುತ್ತಿದ್ದ.ಈ ಬಗ್ಗೆ ಮಾಹಿತಿ ತಿಳಿದ ಕಾಂಗ್ರೆಸ್ನ ಗೀತಾ ಶಿವರಾಮ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರಿಯಾಂಕ್ ಖರ್ಗೆಯವರ ಆಪ್ತ ಸಹಾಯಕ ಕೇಶವ್ ಮೂರ್ತಿಯವರಿಗೆ ವಿಚಾರ ಮುಟ್ಟಿಸಿದ್ದರು. ಬಳಿಕ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಶವ್ ಮೂರ್ತಿ ದೂರು ದಾಖಲಿಸಿದ್ದರು. ಸದ್ಯ ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.