ಬೆಂಗಳೂರು: ಸೂಕ್ತ ಆಡಳಿತ ನೀಡುವಲ್ಲಿ ಎನ್ಡಿಎ ಸರ್ಕಾರ ಸಂಪೂರ್ಣ ಎಡವಿದೆ ಎಂದು ಕೇಂದ್ರದ ಮಾಜಿ ಸಚಿವ ಮನೀಶ್ ತಿವಾರಿ ಹೇಳಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಎನ್ಡಿಎ ಸರ್ಕಾರ ಈ ಎಲ್ಲಾ ಮಾನದಂಡವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಂದು ಭಾರತವು ಹಿಂದೆಂದಿಗಿಂತಲೂ ಬಾಹ್ಯ ಶಕ್ತಿಗಳಿಂದ ಭದ್ರತೆಯ ಸವಾಲನ್ನು ಎದುರಿಸುತ್ತಿದೆ ಎಂದರು.
ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿತ್ತು ಈಗ ಗೃಹ ಸಚಿವರು ಮಣಿಪುರಕ್ಕೆ ಭೇಟಿ ನೀಡುವ ಮನಸು ಮಾಡಿದ್ದಾರೆ. 2015ರಲ್ಲಿ ಕೈಗೊಂಡ ನಾಗಾಲ್ಯಾಂಡ್ ಒಪ್ಪಂದ ಏನಾಯ್ತು ಎಂದು ಯಾರಿಗೂ ಗೊತ್ತಿಲ್ಲ. ಜಮ್ಮು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ 2019ರಲ್ಲಿ ಮಾಡಿದ್ದಾರೆ. ಆದಷ್ಟು ಬೇಗ ಚುನಾವಣೆ ನಡೆಸಲಾಗುವುದು ಎಂದು ಭರವಸೆ ನೀಡಿ ಇದುವರೆಗೂ ಅಲ್ಲಿ ಚುನಾವಣೆ ನಡೆಸಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಸರಿಯಾದ ಉತ್ತರ ತೆಗೆದುಕೊಂಡಿದ್ದೆ, ಆಗಿದ್ದಲ್ಲಿ ಅವರು ಚುನಾವಣೆ ನಡೆಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ? 2014ರಿಂದ 2019ರವರೆಗೆ ಬಿಜೆಪಿಯು ಯಾವುದೇ ರಾಜ್ಯಗಳಲ್ಲಿ ತನ್ನ ಅಭಿವೃದ್ಧಿಯ ಕೆಲಸದ ಆಧಾರದ ಮೇಲೆ ಚುನಾವಣೆ ನಡೆಸಿಲ್ಲ. ಅದಕ್ಕೆ ಉದಾಹರಣೆ ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆ. ದೇಶದಲ್ಲಿ ಕೋಮು ಸಂಘರ್ಷ ಕಾವು ಸದಾ ಇರುವಂತೆ ನೋಡಿಕೊಳ್ಳಲು ಬಿಜೆಪಿ ಸರ್ಕಾರ ಬಯಸುತ್ತದೆ. ಆ ಮೂಲಕ ವಿಭಜನೆ ರಾಜಕೀಯ ಮಾಡಿ ಬಿಜೆಪಿ ಸರ್ಕಾರ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಇದು ದೇಶಕ್ಕೆ ಮಾರಕವಾದ ವಿಚಾರ ಎಂದು ಹೇಳಿದ್ದಾರೆ.