ಲಂಡನ್ : ‘ಮೈಸೂರು ಹುಲಿ’ ಟಿಪ್ಪು ಸುಲ್ತಾನನಿಗಾಗಿಯೇ ಭಾರತದಲ್ಲಿ ವಿಶೇಷವಾಗಿ ತಯಾರಿಸಿದ್ದ ಆಕರ್ಷಕ ವಿನ್ಯಾಸದ ಗನ್ ಇದೀಗ ಇಂಗ್ಲೆಂಡ್ನ ವ್ಯಕ್ತಿಯೊಬ್ಬರ ಸಂಗ್ರಹದಲ್ಲಿದೆ. ಇದು ಸುಮಾರು ₹ 2.04 ಕೋಟಿ ಬೆಲೆಯದ್ದಾಗಿದ್ದು ಅದನ್ನು ರಫ್ತು ಮಾಡದಂತೆ ಬ್ರಿಟನ್ ಸರ್ಕಾರ ನಿಷೇಧ ಹೇರಿದೆ.
ಭಾರತ ಮತ್ತು ಇಂಗ್ಲೆಂಡ್ ಇತಿಹಾಸ ಮತ್ತು ‘ಹೋರಾಟದ ಅವಧಿ’ಯ ಸಾರ್ವಜನಿಕ ಅಧ್ಯಯನದ ಉದ್ದೇಶಕ್ಕಾಗಿ ಬ್ರಿಟನ್ ಮೂಲದ ಸಂಸ್ಥೆಗೆ ಈ ಗನ್ ಅನ್ನು ಸ್ವಾಧೀನಕ್ಕೆ ಪಡೆಯಲು ಸಮಯಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
‘ಫ್ಲಿಂಟ್ಲಾಕ್ ಸ್ಪೋರ್ಟಿಂಗ್ ಗನ್’ನ ವಿಲೇವಾರಿಗೆ ನಿಷೇಧ ಹೇರುವ ತೀರ್ಮಾನವನ್ನು ಬ್ರಿಟನ್ನ ಕಲಾ ಮತ್ತು ಪಾರಂಪರಿಕ ಸಚಿವ ಲಾರ್ಡ್ ಸ್ಟೀಫನ್ ಪಾರ್ಕಿನ್ಸನ್ ಅವರು ಕಳೆದ ವಾರ ತೆಗೆದುಕೊಂಡಿದ್ದಾರೆ. ಸಾಂಸ್ಕೃತಿಕ ಮಹತ್ವದ ಕಲೆ ಮತ್ತು ಪರಿಕರಗಳ ರಫ್ತು ಕುರಿತ ಪರಿಶೀಲನಾ ಸಮಿತಿಯು (ಆರ್ಸಿಇಡಬ್ಲ್ಯುಎ) ಈ ಬಗ್ಗೆ ವರದಿ ಸಲ್ಲಿಸಿತ್ತು.
14 ಬೋರ್ನ ಈ ಗನ್ ಅನ್ನು 1793 ಮತ್ತು 1794ರ ನಡುವೆ ತಯಾರಿಸಲಾಗಿದೆ. ಹಕ್ಕಿಗಳನ್ನು ಶೂಟ್ ಮಾಡುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಗನ್ನ ಮೇಲೆ ಅದನ್ನು ತಯಾರಿಸಿರುವ ಅಸದ್ ಖಾನ್ ಮೊಹಮ್ಮದ್ ಅವರ ಹಸ್ತಾಕ್ಷರವಿದೆ. ಒಟ್ಟು 138 ಸೆಂಟಿ ಮೀಟರ್ ಉದ್ದದ ಈ ಗನ್ ಅನ್ನು ತಯಾರಿಸಲು ಗುಣಮಟ್ಟದ ಮರದ ಕೆತ್ತನೆ ಬಳಸಲಾಗಿದ್ದು, ಅದರ ಮೇಲೆ ಚಿನ್ನ ಮತ್ತು ಬೆಳ್ಳಿಯ ಲೇಪನವಿದೆ. ಬೆಳ್ಳಿಯ ಹಿಡಿಕೆ ಮತ್ತು ಸ್ಟೀಲ್ ಬ್ಯಾರಲ್ ಅನ್ನು ಗನ್ ಒಳಗೊಂಡಿದೆ.
ಬ್ರಿಟಿಷ್ ವಸಾಹತುಶಾಹಿ ಕಾಲಘಟ್ಟದ ಈ ಗನ್ ಅನ್ನು 1790 ಮತ್ತು 1792ರ ಅವಧಿಯಲ್ಲಿ ಟಿಪ್ಪು ಸುಲ್ತಾನ್ ವಿರುದ್ಧ ಹೋರಾಡಿದ್ದ ಬ್ರಿಟಿಷ್ ಸೇನೆಯ ಜನರಲ್ ಅರ್ಲ್ ಕಾರ್ನ್ವಾಲಿಸ್ ಅವರಿಗೆ ಉಡುಗೊರೆ ನೀಡಲಾಗಿತ್ತು ಎಂದು ಹೇಳಲಾಗಿದೆ.
‘ಆಕರ್ಷಕವಾಗಿರುವ ಈ ಶಸ್ತ್ರ ತನ್ನ ಪ್ರಾಚೀನತೆಯ ಕಾರಣದಿಂದಲೇ ಹೆಚ್ಚು ಮಹತ್ವದ್ದಾಗಿದೆ. ಬ್ರಿಟನ್ ಮತ್ತು ಭಾರತದ ನಡುವಿನ ಇತಿಹಾಸವನ್ನು ಅರಿಯಲು ಮುಖ್ಯವಾದ ಸಂಪರ್ಕ ಕೊಂಡಿಯಾಗಿದೆ’ ಎಂದು ಸಚಿವ ಲಾರ್ಡ್ ಪಾರ್ಕಿನ್ಸನ್ ಅಭಿಪ್ರಾಯಪಟ್ಟಿದ್ದಾರೆ.