ಅಹಮದಾಬಾದ್: ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ನಾಯಕ ಎಂಎಸ್ ಧೋನಿಯನ್ನು ಕೊಂಡಾಡಿದರು. ಸಿಎಸ್ಕೆ ತಂಡದ ಈ 5ನೇ ಟ್ರೋಫಿ ಎಂಎಸ್ ಧೋನಿಗೆ ಸಮರ್ಪಿಸುತ್ತೇನೆಂದು ಹೇಳಿದ್ದಾರೆ.
ಸೋಮವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯ ಸಾಕಷ್ಟು ನಾಟಕೀಯ ಬೆಳವಣಿಗೆಗಳನ್ನು ಕಂಡಿತ್ತು. ಭಾನುವಾರ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗಿರಲಲ್ಲ. ಆದರೆ, ಸೋಮವಾರ ಪ್ರಥಮ ಇನಿಂಗ್ಸ್ ಬಳಿಕವೂ ಮಳೆ ಬಂದಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಗಿತ್ತು. ಅಂತಿಮವಾಗಿ ಡಿಎಲ್ಎಸ್ ನಿಯಮದ ಪ್ರಕಾರ ಸಿಎಸ್ಕೆಗೆ 15 ಓವರ್ಗಳಿಗೆ 171 ರನ್ ಗುರಿ ನೀಡಲಾಗಿತ್ತು. ಈ ಮೊತ್ತವನ್ನು ಸಿಎಸ್ಕೆ ಕೊನೆಯ ಎಸೆತದಲ್ಲಿ ಮುಟ್ಟಿತ್ತು.
ಈ ಗೆಲುವಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತು. ಆ ಮೂಲಕ ಇಷ್ಟೇ ಬಾರಿ ಪ್ರಶಸ್ತಿ ಗೆದ್ದಿದ್ದ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸಿಎಸ್ಕೆ ಸರಿಗಟ್ಟಿತು. ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ರವೀಂದ್ರ ಜಡೇಜಾ, ಸಿಎಸ್ಕೆಯ 5ನೇ ಪ್ರಶಸ್ತಿಯನ್ನು ಎಂಎಸ್ ಧೋನಿಗೆ ಸಮರ್ಪಿಸಬೇಕೆಂದು ಹೇಳಿದ್ದಾರೆ.
“ತವರು ಅಭಿಮಾನಿಗಳ ಎದುರು ಐದನೇ ಪ್ರಶಸ್ತಿ ಗೆದ್ದಿರುವುದು ಅದ್ಭುತ ಭಾವನೆಗಳನ್ನು ತಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬೆಂಬಲಿಸಲು ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಇಲ್ಲಿಗೆ ಬಂದಿದ್ದಾರೆ. ಇಲ್ಲಿನ ಪ್ರೇಕ್ಷಕರು ಅದ್ಬುತವಾಗಿದ್ದರು. ತಡರಾತ್ರಿ ಮಳೆ ನಿಲ್ಲುವವರೆಗೂ ಅವರು ನಮಗಾಗಿ ಕಾದಿದ್ದಾರೆ,” ಎಂದು ರವೀಂದ್ರ ಜಡೇಜಾ ತಿಳಿಸಿದ್ದಾರೆ.
“ಸಿಎಸ್ಕೆ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ. ಈ ಗೆಲುವನ್ನು ವಿಶೇಷ ವ್ಯಕ್ತಿ ಎಂಎಸ್ ಧೋನಿಗೆ ಸಮರ್ಪಿಸಬೇಕು. ಏನಾದರೂ ಅಗಲಿ ಬ್ಯಾಟ್ ಅನ್ನು ಜೋರಾಗಿ ಸ್ವಿಂಗ್ ಮಾಡಬೇಕೆಂದು ಅಂದುಕೊಂಡಿದ್ದೆ. ಹೌದು, ಈ ವೇಳೆ ಏನು ಬೇಕಾದರೂ ಆಗಬಹುದು. ಮೋಹಿತ್ ಶರ್ಮಾ ನಿಧಾನಗತಿಯ ಎಸೆತಗಳನ್ನು ಹಾಕುತ್ತಿದ್ದ ಕಾರಣ ನೇರವಾಗಿ ಸಿಕ್ಸರ್ ಹೊಡೆಯಲು ಯೋಚಿಸಿದ್ದೆ. ಅಂದ ಹಾಗೆ ಸಿಎಸ್ಕೆ ತಂಡದ ಪ್ರತಿಯೊಬ್ಬ ಅಭಿಮಾನಿಗೂ ಅಭಿನಂದನೆಯನ್ನು ಅರ್ಪಿಸಬೇಕಾಗಿದೆ,” ಎಂದು ಜಡೇಜಾ ತಿಳಿಸಿದ್ದಾರೆ.