ಚೆನ್ನೈ : ಆತಿಥೇಯ ಗುಜರಾತ್ ಟೈಟನ್ಸ್ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ 5 ವಿಕೆಟ್ಗಳ ಜಯ ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಐದನೇ ಟ್ರೋಫಿ ಎತ್ತಿ ಹಿಡಿಯುವ ಮೂಲಕ ದಾಖಲೆ ಬರೆಯಿತು. ಟ್ರೋಫಿ ಗೆದ್ದು ಮನೆಯಂಗಣಕ್ಕೆ ಮಂಗಳವಾರ (ಮೇ 30) ಹಿಂದಿರುಗುತ್ತಿದ್ದಂತೆಯೇ ಸಿಎಸ್ಕೆ ಫ್ರಾಂಚೈಸಿ ವಿಶೇಷ ಪೂಜೆ ಕೈಗೊಂಡಿದೆ. ಚೆನ್ನೈನ ತ್ಯಾಗರಾಯ ನಗರದಲ್ಲಿ ಇರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಪಾದದಡಿ ಟ್ರೋಫಿಯನ್ನಿಟ್ಟು ವಿಶೇಷ ಪೂಜೆ ಸಲ್ಲಿಸಲಾಗಿದೆ. ಇದರ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿದೆ.
ಚೆನ್ನೈನ ವಿಮಾನ ನಿಲ್ದಾಣದಿಂದ ಸಿಎಸ್ಕೆ ಅಧಿಕಾರಿಗಳು ಟ್ರೋಫಿಯನ್ನು ನೇರವಾಗಿ ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಿದ್ದಾರೆ. ಅಂದಹಾಗೆ ಸಿಎಸ್ಕೆ ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿರಲಿಲ್ಲ. ಫ್ರಾಂಚೈಸಿಯ ಅಧಿಕಾರಿಗಳಷ್ಟೇ ಟ್ರೋಫಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಿದ್ದಾರೆ.