ಬೆಂಗಳೂರು: ಬೆಳ್ಳಂದೂರು ಕೆರೆಗೆ ಸಚಿವ ಈಶ್ವರ್ ಖಂಡ್ರೆ ಇಂದು ಭೇಟಿ ನೀಡಿ, ಕೆರೆ ಮಾಲಿನ್ಯದ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಸಚಿವರಿಗೆ ಬಿಬಿಎಂಪಿ ಅಧಿಕಾರಿಗಳು ಸಾಥ್ ನೀಡಿದರು. ಬಳಿಕ ಮಾತನಾಡಿದ ಸಚಿವರು, ಕೆರೆ ಮಾಲಿನ್ಯದಿಂದ ಸುದ್ದಿಯಾಗಿದೆ.
ಅದು ಬದಲಾಗಬೇಕು. ಕೆರೆಯನ್ನು ಸ್ವಚ್ಛಗೊಳಿಸಲು ಮತ್ತು ಹೂಳು ತೆಗೆಯಲು ಎನ್ಜಿಟಿ ಸ್ಪಷ್ಟ ಆದೇಶ ಹೊರಡಿಸಿದೆ ಆದರೆ ಅರ್ಧದಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. ಇದು ಕೊಳಚೆನೀರಿನಿಂದ ತುಂಬಿ ಹೋಗಿದೆ. ಈ ಕೆರೆಗೆ ತ್ಯಾಜ್ಯ ನೀರು ಒಳಹರಿವು ತಡೆಯಲು ಅಗತ್ಯವಿರುವ ಶುದ್ಧೀಕರಣ ಘಟಕಗಳು 2024 ರಲ್ಲಿ ಪೂರ್ಣಗೊಳ್ಳಲಿದೆ. ಕೆರೆಯ ಮರುಸ್ಥಾಪನೆಯಲ್ಲಿ ಯಾವುದೇ ವಿಳಂಬವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ನೀರಿನ ಗುಣಮಟ್ಟದ ಕುರಿತು ದಿನದ ವರದಿ ನೀಡಲು ಅಧಿಕಾರಿಗಳು ವಿಫಲರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖಂಡ್ರೆ, ಈ ಬಗ್ಗೆ ವಿವರವಾದ ವರದಿಯನ್ನು ಕೇಳಿದರು. ಬೆಳ್ಳಂದೂರು ಕೆರೆಯ ಸುತ್ತಲಿನ ಪ್ರದೇಶದಲ್ಲಿರುವ 490 ಕೈಗಾರಿಕೆಗಳ ಪೈಕಿ ಹಲವೆಡೆ ಶುದ್ಧೀಕರಣ ಘಟಕಗಳನ್ನು ಅಳವಡಿಸಿಲ್ಲ, ಅಧಿಕಾರಿಗಳು ಕೋಟ್ಯಂತರ ರೂಪಾಯಿ ದಂಡ ವಿಧಿಸುತ್ತಿದ್ದು ಅದನ್ನು ಮುಂದುವರಿಸುತ್ತಾರೆ, ನಿಯಮ ಉಲ್ಲಂಘಿಸಿದಲ್ಲಿ ಪ್ರಕರಣ ದಾಖಲಿಸಬೇಕಾಗುತ್ತೆ. ಕ್ರಮಕೈಗೊಳ್ಳಲು ವಿಫಲರಾದ ಅಧಿಕಾರಿಗಳು ಕೂಡ ಕ್ರಮ ಎದುರಿಸಬೇಕಾಗುತ್ತೆ” ಎಂದು ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ ನೀಡಿದರು.