ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಕಾಫಿನಾಡು ಚಿಕ್ಕಮಗಳೂರಿನ ಬಯಲು ಸೀಮೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಗಾಗಿ ಕಾದಿದ್ದ ರೈತರು ಉತ್ತಮ ಬಿತ್ತನೆ ಬೀಜ ತಂದು ಬಿತ್ತನೆ ಕಾರ್ಯ ಆರಂಭ ಮಾಡಿದ್ದಾರೆ.
ತಾಲೂಕಿನ ಬಯಲುಸೀಮೆ ಪ್ರದೇಶದಲ್ಲಿ ಹೆಚ್ಚಾಗಿ ಆಲೂಗಡ್ಡೆ ಬೆಳೆಯುವ ಅಂಬಳೆ, ಸಿರಗಾಪುರ, ಮಳಲೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ನೂರಾರು ರೈತರು ಹಾಸನ ನಗರದ ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿಗಳಿಂದ 4 ಲಾರಿ ಲೋಡ್ ಬಿತ್ತನೆಗಾಗಿ ಆಲೂಗಡ್ಡೆ ತರಿಸಿ, ಉತ್ತಮ ಲಾಭದ ಆಸೆ ತೋರಿಸಿ ರೈತರಿಗೆ ಆಲೂಗಡ್ಡೆ ಬೀಜವನ್ನು ನೀಡಿದ್ರು.
ಹಾಸನದ ಆಲೂಗಡ್ಡೆ ವ್ಯಾಪಾರಿಗಳ ಮಾತು ನಂಬಿದ ನೂರಾರು ರೈತರು, ಎಕರೆಗೆ 60 ಸಾವಿರಕ್ಕೂ ಅಧಿಕ ಹಣವನ್ನ ಖರ್ಚು ಮಾಡಿ ಜಮೀನಿನಲ್ಲಿ ಬಿತ್ತನೆ ಕಾರ್ಯವನ್ನು ಮಾಡಿದ್ದರು. ಇದೀಗ ಬಿತ್ತನೆ ಮಾಡಿ ಮೂರೇ ದಿನಕ್ಕೆ ಆಲೂಗಡ್ಡೆ ಬೀಜ ಕೊಳೆಯಲಾರಂಭಿಸಿದೆ.
ಹಾಸನ ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿಗಳಿಂದ ತಂದ ಆಲೂಗಡ್ಡೆಯನ್ನೇ ಸಿರಗಾಪುರ, ಅಂಬಳೆ ,ಮಳಲೂರು ಸುತ್ತಮುತ್ತಲಿನ ನೂರಾರು ರೈತರು 250 ಎಕರೆಗೂ ಅಧಿಕ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಮೂರೇ ದಿನಕ್ಕೆ ಹಾಸನದ ಆಲೂಗಡ್ಡೆ ಬಿತ್ತನೆ ಬೀಜ ವ್ಯಾಪಾರಿಗಳ ಅಸಲಿ ಮುಖವಾಡ ಬಯಲಾಗಿ, ರೈತರು ಕಣ್ಣೀರು ಹಾಕುತ್ತಿದ್ದಾರೆ.