ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವ ಗಾಸಿಪ್ ಕೂಡ ಮಾಡಬೇಡಿ. ಹಂಗಂತೆ, ಹಿಂಗಂತೆ ಅಂತ ಯಾರೂ ಹೇಳುವುದಕ್ಕೆ ಹೋಗಬೇಡಿ. ತೀರ್ಮಾನ ಮಾಡುವುದು ಸರ್ಕಾರ. ನಿಮಗೆ ಅನಿಸಿದ್ದನ್ನೆಲ್ಲ ಹೇಳೋಕಾಗಲ್ಲ. “ಹೇಗೆ ಮಾಡಬೇಕು, ಏನು ಮಾಡಬೇಕು” ಅಂತ ಸರ್ಕಾರ ಹಾಗೂ ನಾವು ಯೋಚನೆ ಮಾಡುತ್ತೇವೆ.
ನೀವು ಬಹಳ ಸ್ಪೀಡ್ನಲ್ಲಿದ್ದೀರಿ. ನಾವು ನಿಮ್ಮಷ್ಟು ಸ್ಪೀಡ್ ಇಲ್ಲ ಎಂದರು. ಆರ್ಥಿಕ ಹೊರೆ ಎಷ್ಟಾಗುತ್ತೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಆರ್ಥಿಕ ಇಲಾಖೆ ಅಧಿಕಾರಿಗಳು ಕೂಡ ಸಲಹೆ ನೀಡಿದ್ದಾರೆ. ರೀ ವರ್ಕ್ ಮಾಡಿ ಕ್ಯಾಬಿನೆಟ್ಗೆ ಸಲ್ಲಿಸಲು ತಿಳಿಸಿದ್ದಾರೆ. ರೀ ವರ್ಕ್ ಮಾಡಿ ಆಲೋಚನೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧರಾಗಿದ್ದೇವೆ. ಅಧಿಕಾರಿಗಳು ತಮ್ಮ ಅಭಿಪ್ರಾಯ, ಸಲಹೆ ತಿಳಿಸಿದ್ದಾರೆ.
ಯಾರೂ ಕೂಡ ಊಹಾಪೋಹಗಳಿಗೆ ಅವಕಾಶ ನೀಡಬೇಡಿ. ಆ ಬಗ್ಗೆ ಹೆಚ್ಚಿನ ಗಮನ ನೀಡಬೇಡಿ. ನಾವು ನಮ್ಮ ಪ್ರಣಾಳಿಕೆ, ಕೊಟ್ಟಿರುವ ಮಾತಿನ ಬಗ್ಗೆ ಅರಿವಿದೆ. ಈ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಕ್ಕೆ ತರುವುದು ನಮ್ಮ ಆದ್ಯತೆ ಎಂದು ಹೇಳಿದ್ದಾರೆ