ಚಿಕ್ಕಬಳ್ಳಾಪುರ : ಕ್ಷೇತ್ರದ ಸರ್ಕಾರಿ ಪೌಢಶಾಲೆಗಳ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಸಾವಿರ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರುಪಾಯಿಗಳ ಸಹಾಯ ಧನವನ್ನು ತಮ್ಮ ಸ್ವಂತ ಹಣದಿಂದ ಕೊಡುತ್ತೇನೆ ಎಂದು ನೂತನ ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಪ್ರೌಢಶಾಲೆಯಿಂದ 5 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅವರನ್ನು ರಾರಯಂಕ್ ಗಳಿಸುವಂತೆ ಮಾಡಲಾಗುವುದು ಎಂದರು.
ಪ್ರತಿಭಾವಂತ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್: ಪ್ರತಿ ಶಾಲೆಯಿಂದ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತ್ಯೇಕ ಹಾಸ್ಟೆಲ್ನಲ್ಲಿ ಇರಿಸಲಾಗುವುದು. ಅವರಿಗೆ ಸರ್ಕಾರಿ ಶಾಲೆಯ ಶಿಕ್ಷಕರೇ ಕೋಚಿಂಗ್ ನೀಡುತ್ತಾರೆ. ಅವರಿಗೆ ತಗಲುವ ಎಲ್ಲಾ ಖರ್ಚುಗಳನ್ನು ತಾವೇ ಭರಿಸುತ್ತಿರುವುದಾಗಿ ಹೇಳಿದರು. ಕಾರ್ಪೊರೇಟ್ ಶಾಲೆಗಳ ಮಾದರಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಪಾಠ ಪ್ರವಚನಗಳು ನಡೆಯುವಂತೆ ಮಾಡಲಾಗುವುದು. ವಿಶೇಷ ರೀತಿಯಲ್ಲಿ ಎಲ್ಲಾ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಶೇಕಡ 80 ರಷ್ಟುಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಈ ಬಗ್ಗೆ ಪೋಷಕರಿಗೂ ಸಹ ತಿಳವಳಿಕೆ ನೀಡಲಾಗುವುದು ಎಂದರು.