ದೆಹಲಿ: 2024 ರ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸುತ್ತಿವೆ. ಇದಕ್ಕೆ ಪೂರ್ವಭಾವಿಯಾಗಿ ಬಿಜೆಪಿ ಮತ್ತೆ ‘ಮೋದಿ ಬ್ರ್ಯಾಂಡ್’ ಅನ್ನು ಮತ್ತೆ ಬಳಸಿಕೊಳ್ಳುವ ಚಿಂತನೆ ನಡೆಸಿದೆ. ಆದರೆ, ಇದರ ಮೇಲೆ ಸಂಪೂರ್ಣ ಅವಲಂಬನೆಯಾಗುವುದು ತುಂಬಾ ಅಪಾಯಕಾರಿ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ಇದು ಕೇಸರಿ ಪಾಳಯದಲ್ಲಿ ಆತಂಕವನ್ನು ಹೆಚ್ಚಿಸಿದೆ. ‘ದಿ ಟೆಲಿಗ್ರಾಪ್’ ಪತ್ರಿಕೆ ಪ್ರಕಟಿಸಿರುವ ಈ ವರದಿಯನ್ನು ಓದಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ಸರ್ಕಾರದ ಒಂಬತ್ತನೇ ವಾರ್ಷಿಕೋತ್ಸವವನ್ನು ಟ್ವೀಟ್ ಮಾಡುವ ಮೂಲಕ, ‘ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.
ಇಂದು ನಾವು ರಾಷ್ಟ್ರದ ಸೇವೆಯಲ್ಲಿ 9 ವರ್ಷಗಳನ್ನು ಪೂರೈಸುತ್ತಿದ್ದೇವೆ. ನಾನು ನಮ್ರತೆ ಹಾಗೂ ಕೃತಜ್ಞತೆಯಿಂದ ತುಂಬಿ ಹೋದಿದ್ದೇನೆ. ನಮ್ಮ ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ಕ್ರಿಯೆಯು ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದ ಮಾರ್ಗದರ್ಶಿಸಲ್ಪಟ್ಟಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಾವು ಇನ್ನೂ ಹೆಚ್ಚು ಶ್ರಮಿಸುತ್ತೇವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಸರ್ಕಾರ ಮತ್ತು ಬಿಜೆಪಿ ಕಳೆದ ವಾರದಿಂದ ಮೋದಿ ಆಡಳಿತದ ಒಂಬತ್ತು ವರ್ಷಗಳ ಸಂಭ್ರಮಾಚರಣೆ ಮಾಡಿದ್ದು, ಬ್ರ್ಯಾಂಡ್ ಮೋದಿಯನ್ನು ಹೊಗಳುವುದರ ಮೇಲೆ ಕೇಂದ್ರೀಕರಿಸಿದೆ.
ಒಂಬತ್ತು ವರ್ಷಗಳ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಯ ಪ್ರಚಾರ ಕಾರ್ಯಕ್ರಮಗಳನ್ನು ದೇಶದಾದ್ಯಂತ ಕೈಗೊಳ್ಳಲು ಬಿಜೆಪಿ ಮುಂದಾಗಿದೆ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಸಿದ್ಧಗೊಳ್ಳುವ ಅವಕಾಶವನ್ನು ಬಿಜೆಪಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸತತ ಮೂರನೇ ಬಾರಿಗೆ ಗೆಲ್ಲುವ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಸರಿಗಟ್ಟಲು ಮೋದಿ ಕಣ್ಣಿಟ್ಟಿದ್ದಾರೆ.
‘ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿಯಲು ದೇಶದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳು ಮತ್ತು ರ್ಯಾಲಿಗಳನ್ನು ಆಯೋಜಿಸಲಾಗುವುದು. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಮೋದಿಜಿ ಪ್ರಧಾನಿಯಾಗಿ ಮುಂದುವರಿಯಬೇಕು’ ಎಂದು ಜನರಿಗೆ ತಿಳಿಸಲಾಗುವುದು ಎಂಬುದಾಗಿ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ, ಈ ವರ್ಷಾಂತ್ಯದಲ್ಲಿ ಪ್ರಮುಖ ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಈ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಗೆ ಸವಾಲು ಎದುರಾಗಿದೆ ಎಂಬುದು ಪಕ್ಷದ ಆಂತರಿಕ ಮೌಲ್ಯಮಾಪನದ ಫಲಿತಾಂಶ ಹೇಳಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಂತಹ ರಾಜ್ಯಗಳ ಜೊತೆಗೆ ದಕ್ಷಿಣದ ತೆಲಂಗಾಣ ರಾಜ್ಯವು ಚುನಾವಣೆ ಎದುರಿಸಲಿವೆ
ಛತ್ತೀಸ್ಗಢದಲ್ಲಿ ಇದೇ ರೀತಿಯ ಸವಾಲನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿರುವ ರಾಜಸ್ಥಾನವನ್ನು ಗೆಲ್ಲುವ ವಿಶ್ವಾಸವಿದೆ. ನೆರೆಯ ಕರ್ನಾಟಕದಲ್ಲಿ ಹಿನ್ನಡೆಯಾದ ನಂತರ, ತೆಲಂಗಾಣದಲ್ಲಿ ಅದ್ಭುತ ಸಾಧನೆಗಳನ್ನು ಮಾಡುವ ಭರವಸೆಯನ್ನು ಪಕ್ಷ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.
‘ಮೋದಿಜಿಯವರ ಜನಪ್ರಿಯತೆ ಇನ್ನೂ ಪ್ರಬಲವಾಗಿದೆ. ಆದರೆ ನಾವು ರಾಜ್ಯ ಚುನಾವಣೆಗಳಲ್ಲಿ ಅವರ ಇಮೇಜ್ ಅನ್ನು ಪಣಕ್ಕಿಟ್ಟು ಸೋಲನ್ನು ಎದುರಿಸುವುದನ್ನು ಮುಂದುವರೆಸಿದರೆ, ಮೋದಿ ವರ್ಚಸ್ಸು ಮಸುಕಾಗುತ್ತದೆ. ಇದು ಲೋಕಸಭೆಯ ಮೇಲೆ ಪರಿಣಾಮ ಬೀರಬಹುದು’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ
ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಸತತ ಸೋಲಿನ ನಂತರ, ಬಿಜೆಪಿ ನಾಯಕರು ಮೋದಿ ಬ್ರ್ಯಾಂಡ್ ರಾಜ್ಯ ಚುನಾವಣೆಗಳಲ್ಲಿ ಕೆಲಸ ಮಾಡುವುದಿಲ್ಲವೆಂಬುದನ್ನು ಅರಿತುಕೊಂಡಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿದುಕೊಂಡಿದ್ದಾರೆ. ರಾಜ್ಯ ಚುನಾವಣೆಗಳಲ್ಲಿನ ಹಿನ್ನಡೆಯಿಂದಾಗಿ ಬ್ರ್ಯಾಂಡ್ ಮೋದಿ ತನ್ನ ಹೊಳಪನ್ನು ಕಳೆದುಕೊಳ್ಳುವ ಅಪಾಯವು ದೊಡ್ಡ ಚಿಂತೆಯಾಗಿದೆ. ಅತ್ತ ಭಾರತ್ ಜೋಡೋ ಯಾತ್ರೆ ಬಳಿಕ ರಾಹುಲ್ ಗಾಂಧಿ ಅವರ ರೇಟಿಂಗ್ ಹೆಚ್ಚಿದೆ. ಇದು ಬಿಜೆಪಿಯಲ್ಲಿ ಕಳವಳವನ್ನು ಹುಟ್ಟುಹಾಕಿದೆ.