ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯವಾಗಿದ್ದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಕಳೆದ ಸೋಮವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಸಿಎಸ್ಕೆ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ನಲ್ಲಿ ಐದನೇ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಈ ಹಿನ್ನೆಲೆಯಲ್ಲಿ ಎಂಎಸ್ ಧೋನಿಯನ್ನು ಮಾಜಿ ಆಲ್ರೌಂಡರ್ ರವಿ ಶಾಸ್ತ್ರಿ ಶ್ಲಾಘಿಸಿದ್ದಾರೆ.
2023ರ ಐಪಿಎಲ್ ಫೈನಲ್ ಬಳಿಕ ಮಾತನಾಡಿದ್ದ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಎಂಎಸ್ ಧೋನಿ ಪರಂಪರೆಯನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಜಾರ್ಖಂಡ್ ರಾಜ್ಯವಾದರೂ ದಕ್ಷಿಣ ಭಾರತದ ರಾಜ್ಯಗಳಿಂದ ಎಂಎಸ್ ಧೋನಿ ಮೇಲೆ ಅಪಾರ ಪ್ರೀತಿ ಇದೆ ಎಂದು ಹೇಳಿದ್ದಾರೆ.
“250 ಐಪಿಎಲ್ ಪಂದ್ಯಗಳು ಎಂಎಸ್ ಧೋನಿಯ ಫಿಟ್ನೆಸ್ ಅನ್ನು ಸಾಬೀತುಪಡಿಸುತ್ತವೆ. ಈ ಟೂರ್ನಿಯಲ್ಲಿ ಎಂಎಸ್ ಧೋನಿ ಬಿಟ್ಟು ಹೋಗಲಿರುವ ಪರಂಪರೆಯನ್ನು ಯಾರಿಂದಲೂ ಸರಿಗಟ್ಟಲು ಸಾಧ್ಯವಿಲ್ಲ. ಚೆನ್ನೈ ಸೇರಿದಂತೆ ತಮಿಳುನಾಡಿನ ಸಂಪೂರ್ಣ ಜನ ಎಂಎಸ್ ಧೋನಿಯನ್ನು ತಲಾ ಎಂದು ಕರೆಯುತ್ತಾರೆ. ಜಾರ್ಖಂಡ್ನ ಒಬ್ಬ ವ್ಯಕ್ತಿ ದಕ್ಷಿಣ ಭಾರತದ ಸಿಎಸ್ಕೆ ಅಭಿಮಾನಿಗಳಿಂದ ಸ್ವೀಕರಿಸಿದ ಪ್ರೀತಿ ಮತ್ತು ಪ್ರಶಂಸೆ ಈ ಕ್ರಿಕೆಟಿಗನ ಶ್ರೇಷ್ಠತೆಗೆ ಸಾಕ್ಷಿಯಾಗಿದೆ,” ಎಂದು ರವಿ ಶಾಸ್ತ್ರಿ ಗುಣಗಾನ ಮಾಡಿದ್ದಾರೆ.
ಫೈನಲ್ ಪಂದ್ಯದ ಬಳಿಕ ಎಂಎಸ್ ಧೋನಿಗೆ ನಿವೃತ್ತಿ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಎಂಎಸ್ ಧೋನಿ, ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ. ಆದರೆ, ಟೂರ್ನಿಯುದ್ದಕ್ಕೂ ಅಭಿಮಾನಿಗಳು ನನ್ನ ಮೇಲೆ ಸಾಕಷ್ಟು ಪ್ರೀತಿ ಹಾಗೂ ವಾತ್ಸಲ್ಯ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೊಂದು ಆವೃತ್ತಿಯಲ್ಲಿ ಆಡಲು ಬಯಸುತ್ತಿದ್ದೇನೆ. ಇದಕ್ಕಾಗಿ ಮುಂದಿನ 9 ತಿಂಗಳ ಕಾಲ ಕಠಿಣ ಪರಿಶ್ರಮ ಪಡುತ್ತೇನೆ. ಆದರೆ, ಇದೆಲ್ಲವೂ ನನ್ನ ದೇಹವನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದರು
“ಇಲ್ಲಿಂದ ಹೊರಗಡೆ ಹೋಗುವುದು ತುಂಬಾ ಸುಲಭ ಆದರೆ, ಮತ್ತೊಮ್ಮೆ ಕಮ್ಬ್ಯಾಕ್ ಮಾಡುವುದು ತುಂಬಾನೇ ಕಷ್ಟ. ನಾನು ಎಲ್ಲಿಗೇ ಹೋದರೂ ನನ್ನ ಮೇಲೆ ಅಭಿಮಾನಿಗಳು ತೋರುತ್ತಿದ್ದ ಪ್ರೀತಿ ಹಾಗೂ ವಾತ್ಸಲ್ಯ ಅದ್ಭುತವಾಗಿತ್ತು. ಇವರಿಗಾಗಿ ನಾನು ಮತ್ತೊಂದು ಆವೃತ್ತಿಯಲ್ಲಿ ಆಡಲು ಬಯಸುತ್ತಿದ್ದೇನೆ. ಮತ್ತೊಂದು ಟೂರ್ನಿಯಲ್ಲಿ ಆಡಲು ಮುಂದಿನ 9 ತಿಂಗಳ ಕಾಲ ಕಷ್ಟಪಡುತ್ತೇನೆ. ನನ್ನ ಫಿಟ್ನೆಸ್ ಸರಿಯಾಗಿದ್ದು ನಾನು ಇಲ್ಲಿಗೆ ಮರಳಿಸಿದರೆ, ಇದು ಅಭಿಮಾನಿಗಳಿಗೆ ವರದಾನವಾಗಲಿದೆ,” ಎಂದು ಎಂಎಸ್ ಧೋನಿ ತಿಳಿಸಿದ್ದಾರೆ.