ಬೆಂಗಳೂರು: ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸ್ಪಂದಿಸುವ ಗುಣ ಇಲ್ಲದಿದ್ದರೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿ. ವೀರಪ್ಪ ಅವರು ಮುಖ್ಯ ನ್ಯಾಯಮೂರ್ತಿ ಆಗುವಾಗಲೂ ನಾನು ಮುಖ್ಯಮಂತ್ರಿ ಆಗಿದ್ದೆ. ಈಗ ಇವರ ನಿವೃತ್ತಿ ಸಂದರ್ಭದಲ್ಲೂ ನಾನು ಮುಖ್ಯಮಂತ್ರಿ ಆಗಿರುವುದು ಸುಸಂದರ್ಭ.
ನಮಗೆ ಉನ್ನತ ಸ್ಥಾನ ಸಿಕ್ಕಾಗ ಪ್ರಾಮಾಣಿಕವಾಗಿ ಜನಸೇವೆ ಮಾಡಿದರೆ ಆ ಸ್ಥಾನದ ಘನತೆ ಹೆಚ್ಚುತ್ತದೆ. ಸಮಾಜದ ಅರಿವಿದ್ದವರು, ಬದುಕನ್ನು ಅರ್ಥ ಮಾಡಿಕೊಂಡವರು, ಜನರ ಸಂಕಷ್ಟಗಳನ್ನು ಅನುಭವಿಸಿದ್ದವರು, ಆ ಬಗ್ಗೆ ಸಹಾನುಭೂತಿ ಹೊಂದಿದ್ದವರು ಮಾತ್ರ ಸಮಾಜಮುಖಿಯಾಗಿದ್ದು, ಉನ್ನತ ಸ್ಥಾನದ ಘನತೆ ಹೆಚ್ಚಿಸಬಲ್ಲರು ಎಂದು ಹೇಳಿದರು. ಬಿ. ವೀರಪ್ಪ ಅವರು ದಕ್ಷತೆ, ಪ್ರಾಮಾಣಿಕತೆ ಜತೆಗೆ ವಕೀಲ ಸಮೂಹದ ಪ್ರೀತಿಯನ್ನೂ ಗಳಿಸಿದ್ದರು ಎನ್ನುವುದಕ್ಕೆ ಇಲ್ಲಿ ಸೇರಿರುವ ಅಪಾರ ವಕೀಲ ಸಮೂಹವೇ ಸಾಕ್ಷಿ.
ದುರ್ಬಲ ವರ್ಗದವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಕೆಳ ಹಂತದಲ್ಲೇ ದುರ್ಬಲ ವರ್ಗಗಳಿಗೆ ನ್ಯಾಯ ಸಿಗುವಂತಾಗಬೇಕು. ಬಿ. ವೀರಪ್ಪ ಅವರು ಈ ದೃಷ್ಟಿಯಲ್ಲಿ ಮೌಲ್ಯಯುತವಾದ ತೀರ್ಪುಗಳನ್ನು ನೀಡಿದ್ದಾರೆ. ಇವು ಕಿರಿಯ ವಕೀಲರಿಗೆ ಮಾದರಿ ಆಗಿವೆ ಎಂದು ಹೇಳಿದರು