ಬೆಂಗಳೂರು: ಆನೆ ದಂತ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 45 ವರ್ಷದ ರವಿಕುಮಾರ್, 58 ವರ್ಷದ ಸೋಮಶೇಖರ್ ಅಲಿಯಾಸ್ ಶಿವಣ್ಣ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಬಂಧಿತರು ಮೂಲತಃ ರಾಮನಗರದ ಮೂಲದವರು ಎಂದು ತಿಳಿದು ಬಂದಿದೆ. ಆರೋಪಿಗಳು, ಬೆಂಗಳೂರಿನ ಬನಶಂಕರಿಯ ಹನುಗಿರಿ ಬೆಟ್ಟದ ನೀಲಗಿರಿ ತೋಪಿನಲ್ಲಿ ಆನೆ ದಂತವನ್ನು ಮಾರಾಟ ಮಾಡಲು ಯತ್ನಿಸಿದರು. ಈ ಸಂಬಂಧ ಜೆಪಿ ನಗರ ಪಿಎಸ್ ಐ ಮನೋಜ್ ಕುಮಾರ್ ಅವರು ಮಾರಾಟದ ಬಗ್ಗೆ ಮಾಹಿತಿ ತಿಳಿಸಿದರು.
ಮಾಹಿತಿ ಆಧರಿಸಿ ದಾಳಿ ನಡೆಸಿದ ಗಿರಿನಗರ ಪೊಲೀಸರು, ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 25.5 ಕೆಜಿ ತೂಕದ ಆನೆ ದಂತ ಜಪ್ತಿ ಮಾಡಲಾಗಿದೆ. ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.