ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಅನುದಾನ ತಡೆಹಿಡಿದಿದ್ದ ವಿಚಾರಕ್ಕೆ ಸಂಬಂಧಿಸಿ ಅನುದಾನ ಮುಂದುವರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಿದ್ಧಗಂಗಾ ಮಠದ ವಸತಿ ನಿಲಯದ ಟೆಂಡರ್ ಮುಂದುವರಿಸಲು, ತಡೆಹಿಡಿದಿದ್ದ 9.90 ಕೋಟಿ ಅನುದಾನ ಮುಂದುವರಿಸಲು PWDಗೆ ಸೂಚನೆ ನೀಡಿದ್ದಾರೆ.ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಸತಿ ನಿಲಯ ಕಟ್ಟಡ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಂದುವರೆಸಲು ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಇನ್ನೂ ಪ್ರಾರಂಭ ವಾಗದಿರುವ ಕಾಮಗಾರಿಗಳನ್ನು ಮರುಪರಿಶೀಲನೆಗಾಗಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಅದರಲ್ಲಿ 9.90 ಕೋಟಿ ರೂ. ವೆಚ್ಚದ ಸಿದ್ದಗಂಗಾ ಮಠದ ವಸತಿ ನಿಲಯದ ಕಾಮಗಾರಿಯೂ ಸೇರಿತ್ತು. ಈ ಕಾಮಗಾರಿಯ ತಾಂತ್ರಿಕ ಬಿಡ್ ತೆರೆಯಲಾಗಿತ್ತು.
ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ನಾವು ಬದ್ದವಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಬೆಂಗಳೂರು ವಕೀಲರ ಸಂಘ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಈ ಭರವಸೆ ನೀಡಿದರು.
ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ವಕೀಲ ಸಮೂಹ ಈ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಈ ಪ್ರತಿಭಟನೆಗೆ ನಾನೂ ಬೆಂಬಲ ಸೂಚಿಸಿ ವಿಧಾನಸಭೆಯಲ್ಲಿ ವಕೀಲ ಸಮೂಹದ ಪರವಾಗಿ ಧ್ವನಿ ಎತ್ತಿದ್ದೆ. ಈಗ ನಾವೇ ಅಧಿಕಾರಕ್ಕೆ ಬಂದಿದ್ದೇವೆ. ಈಗ ಈ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬದ್ದವಾಗಿದ್ದೇವೆ ಎಂದರು.
ನಮಗೆ ಉನ್ನತ ಅವಕಾಶಗಳು ಸಿಕ್ಕಾಗ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡಾಗ ಮಾತ್ರ ಬದುಕು ಸಾರ್ಥಕ ಆಗುತ್ತದೆ. ಉತ್ತಮ ನ್ಯಾಯದಾನದ ಮೂಲಕ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಮ್ಮ ಬದುಕು ಮತ್ತು ವೃತ್ತಿಯನ್ನು ಸಾರ್ಥಕಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಿ.ವೀರಪ್ಪ ಅವರು ಮುಖ್ಯ ನ್ಯಾಯಮೂರ್ತಿ ಆಗುವಾಗಲೂ ನಾನು ಮುಖ್ಯಮಂತ್ರಿ ಆಗಿದ್ದೆ. ಈಗ ಇವರ ನಿವೃತ್ತಿ ಸಂದರ್ಭದಲ್ಲೂ ನಾನು ಮುಖ್ಯಮಂತ್ರಿ ಆಗಿರುವುದು ಸುಸಂದರ್ಭ. ನಮಗೆ ಉನ್ನತ ಸ್ಥಾನ ಸಿಕ್ಕಾಗ ಪ್ರಾಮಾಣಿಕವಾಗಿ ಜನಸೇವೆ ಮಾಡಿದರೆ ಆ ಸ್ಥಾನದ ಘನತೆ ಹೆಚ್ಚುತ್ತದೆ. ಸಮಾಜದ ಅರಿವಿದ್ದವರು, ಬದುಕನ್ನು ಅರ್ಥ ಮಾಡಿಕೊಂಡವರು, ಜನರ ಸಂಕಷ್ಟಗಳನ್ನು ಅನುಭವಿಸಿದ್ದವರು, ಆ ಬಗ್ಗೆ ಸಹಾನುಭೂತಿ ಹೊಂದಿದ್ದವರು ಮಾತ್ರ ಸಮಾಜಮುಖಿಯಾಗಿದ್ದು ಉನ್ನತ ಸ್ಥಾನದ ಘನತೆ ಹೆಚ್ಚಿಸಬಲ್ಲರು.
ಬಿ.ವೀರಪ್ಪ ಅವರು ದಕ್ಷತೆ, ಪ್ರಾಮಾಣಿಕತೆ ಜತೆಗೆ ವಕೀಲ ಸಮೂಹದ ಪ್ರೀತಿಯನ್ನೂ ಗಳಿಸಿದ್ದರು ಎನ್ನುವುದಕ್ಕೆ ಇಲ್ಲಿ ಸೇರಿರುವ ಅಪಾರ ವಕೀಲ ಸಮೂಹವೇ ಸಾಕ್ಷಿ. ದುರ್ಬಲ ವರ್ಗದವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಕೆಳ ಹಂತದಲ್ಲೇ ದುರ್ಬಲ ವರ್ಗಗಳಿಗೆ ನ್ಯಾಯ ಸಿಗುವಂತಾಗಬೇಕು. ಬಿ.ವೀರಪ್ಪ ಅವರು ಈ ದೃಷ್ಟಿಯಲ್ಲಿ ಮೌಲ್ಯಯುತವಾದ ತೀರ್ಪುಗಳನ್ನು ನೀಡಿದ್ದಾರೆ. ಇವು ಕಿರಿಯ ವಕೀಲರಿಗೆ ಮಾದರಿ ಆಗಿವೆ ಎಂದರು.