ಬೆಂಗಳೂರು: ಮೇ ತಿಂಗಳು ದಾಖಲೆ ಮಟ್ಟದಲ್ಲಿ ಮಳೆಯಾಗಿದೆ. ನಗರದಲ್ಲಿ 30.1 ಸೆಂ.ಮೀ ಮಳೆ ದಾಖಲಾಗುವುದರ ಮೂಲಕ, ಇದು ಮೇ 1957 ರಲ್ಲಿ ದಾಖಲಾದ 28 ಸೆಂ.ಮೀ.ನ ದೀರ್ಘಾವಧಿಯ ದಾಖಲೆಯನ್ನು ಮುರಿದಿದೆ.
2015 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ, ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ಸುರಿಯುವ ಮಳೆಯು ಸರಾಸರಿ ವರ್ಷಕ್ಕೆ ಒಟ್ಟು 128.7 ಮಿಮೀ ಮಳೆಗಿಂತ ಹೆಚ್ಚಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ದತ್ತಾಂಶ ತೋರಿಸುತ್ತದೆ.
ಕಳೆದ ಎಂಟು ವರ್ಷಗಳಲ್ಲಿ ಮೇ ತಿಂಗಳ ಸರಾಸರಿ ಮಳೆ 18.5 ಸೆಂ.ಮೀ ಇದೆ. ಕಳೆದ ವರ್ಷ ಅತಿ ಹೆಚ್ಚು ಅಂದ್ರೆ 27 ಸೆಂ.ಮೀ ಮಳೆಯಾಗಿದ್ದು, 2020 ಮತ್ತು 2021ರಲ್ಲಿ ಅತಿ ಕಡಿಮೆ ಅಂದ್ರೆ 13 ಸೆಂ.ಮೀ. ಮಳೆಯಾಗಿತ್ತು.
ಈ ವರ್ಷ ಮಾರ್ಚ್ 1 ರಿಂದ ಮೇ 31ರವರೆಗೆ ಬೆಂಗಳೂರು ನಗರದಲ್ಲಿ 343 ಮಿಮೀ ಮಳೆಯಾಗಿದ್ದು, ಸಾಮಾನ್ಯಕ್ಕಿಂತ 173 ಮಿಮೀ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ವರದಿ ತಿಳಿಸಿದೆ. ಎಚ್ ಎಎಲ್ ವಿಮಾನ ನಿಲ್ದಾಣದ ಬಳಿ 275 ಮಿ.ಮೀ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 227 ಮಿ.ಮೀ ಮಳೆ ದಾಖಲಾಗಿದೆ.