ಬೆಂಗಳೂರು: ಕೃಷ್ಣಾ-ಭೀಮೆಗೆ ನೀರು ಬಿಡಿ ಎಂದು ಮಹಾರಾಷ್ಟ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಬುಧವಾರ ಪತ್ರ ಬರೆದಿರುವ ಮುಖ್ಯಮಂತ್ರಿ ಅವರು, ಉತ್ತರ ಕರ್ನಾಟಕದ ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿರು ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ.
ಆ ಜಿಲ್ಲೆಗಳ ಜನ ಮತ್ತು ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರು ಪೂರೈಸಲು ಕೊಯ್ನಾ ಜಯಲಾಯದಿಂದ ಕೃಷ್ಣಾ ನದಿಗೆ 3 ಟಿಎಂಸಿ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕೋರಿದ್ದಾರೆ.
ಈಗಾಗಲೇ ಮಹಾರಾಷ್ಟ್ರ ಸರ್ಕಾರವು ಮೇ 15ಕ್ಕೂ ಮುನ್ನ ಕೃಷ್ಣಾ ನದಿಗೆ 1 ಟಿಎಂಸಿ ನೀರು ಹರಿಸಿರುವುದಕ್ಕೆ ಮುಖ್ಯಮಂತ್ರಿ ಅವರು ಧನ್ಯವಾದ ತಿಳಿಸಿದ್ದು, ಕೂಡಲೇ ಕೃಷ್ಣಾ ನದಿಗೆ ಇನ್ನು ಎರಡು ಟಿಎಂಸಿ ಮತ್ತು ಭೀಮಾ ನದಿಗೆ 3 ಟಿಎಂಸಿ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ತಮ್ಮ ಪತ್ರದಲ್ಲಿ ಕೋರಿದ್ದಾರೆ.