ಮಂಡ್ಯ :- ರಾಜ್ಯ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ದಲಿತ ಮುಖಂಡ ಮರಳಿಗ ಶಿವರಾಜ್ ನನ್ನು ಮದ್ದೂರು ಪೋಲೀಸರು ಗುರುವಾರ ಬಂಧಿಸಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಅಧ್ಯಕ್ಷ ಕೆ.ದೊರೆಸ್ವಾಮಿ ನೀಡಿದ ದೂರಿನ್ವನಯ ಪೋಲೀಸರು ಮರಳಿಗ ಶಿವರಾಜ್ ವಿರುದ್ಧ ಐಪಿಸಿ ಸೆಕ್ಷನ್ 153 ರ ಅನ್ವಯ ಪ್ರಟರಣ ದಾಖಲು ಮಾಡಿಕೊಂಡಿದ್ದಾರೆ.
ಆರೋಪಿ ಮರಳಿಗ ಶಿವರಾಜ್ ಕಳೆದ ಮೇ.30 ರಂದು ಗೃಹ ಸಚಿವ ಜಿ.ಪರಮೇಶ್ವರ್ ಒಬ್ಬ ಅಯೋಗ್ಯ, ಸ್ವಂತ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ. ಈತ ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸಲಿಲ್ಲ. ಆರ್.ಎಸ್.ಎಸ್ ನವರ ಜೊತೆ ನಂಟು ಹೊಂದಿದ್ದಾರೆ. ಇವರ ಬಗ್ಗೆ ತಾಕತ್ ಇದ್ದವರು ಉತ್ತರಿಸಲಿ ಎಂದು ಜಾಲತಾಣದಲ್ಲಿ ಅವಹೇಳನವಾಗಿ ಪೋಸ್ಟ್ ನಿಂದಿಸಿದ್ದಾರೆ ಎಂದು ದೂರುದಾರ ದೊರೆಸ್ವಾಮಿ ದಾಖಲೆ ಸಮೇತ ಪೋಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ ಬಲಗೈ ಬಣದವರ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ. ಮುಂದಿನ ದಿನಗಳಲ್ಲಿ ದಲಿತ ಜನಾಂಗದವರ ನಡುವೆ ಘರ್ಷಣೆಗಳು ನಡೆದು ಶಾಂತಿ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ಮರಳಿಗ ಶಿವರಾಜ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ಮರಳಿಗ ಶಿವರಾಜ್ ಇತ್ತಿಚೆಗೆ ಮದ್ದೂರು ತಾಲೂಕು ಕಛೇರಿ ಆವರಣದಲ್ಲಿ ನಡೆದ ದಲಿತ ಯುವಕನ ಮೇಲಿನ ಕೊಲೆ ಯತ್ನ ಪ್ರಕರಣ, ಮರಳಿಗ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಿಸಿ ವಿವಾಹ ಮಾಡಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆ ಸೇರಿದಂತೆ ಮದ್ದೂರು, ಬೆಸಗರಹಳ್ಳಿ ಪೋಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಈತನ ವಿರುದ್ಧ ತಹಶೀಲ್ದಾರ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ನಂತರ ಮುಂಜಾಗ್ರತಾ ಕ್ರಮವಾಗಿ ಮರಳಿಗ ಶಿವರಾಜ್ ನನ್ನು ರೌಡಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಮದ್ದೂರು ವೃತ್ತ ನಿರೀಕ್ಷಕ ಎಸ್.ಸಂತೋಷ್ ತಿಳಿಸಿದರು.
ವರದಿ : ಗಿರೀಶ್ ರಾಜ್ ಮಂಡ್ಯ