ನವದೆಹಲಿ: ದೆಹಲಿ ಪೊಲೀಸರು ತನಿಖೆಯನ್ನು ಮುಗಿಸುವವರೆಗೆ ಕುಸ್ತಿಪಟುಗಳು (Wrestlers Protest)ಕಾಯಬೇಕು. ಅದೇ ವೇಳೆ ಅವರಿಗೇ ಹಾನಿಯುಂಟು ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್(Anurag Thakur) ಹೇಳಿದ್ದಾರೆ. ಕುಸ್ತಿಪಟುಗಳು ದೆಹಲಿ ಪೊಲೀಸರು (Delhi Police) ತಮ್ಮ ತನಿಖೆಯನ್ನು ಮುಗಿಸುವವರೆಗೆ ಕಾಯಬೇಕು. ಕ್ರೀಡೆ ಅಥವಾ ಮಹತ್ವಾಕಾಂಕ್ಷಿ ಕುಸ್ತಿಪಟುಗಳಿಗೆ ಹಾನಿಯನ್ನುಂಟುಮಾಡುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು. ನಾವೆಲ್ಲರೂ ಕ್ರೀಡೆ ಮತ್ತು ಕ್ರೀಡಾಪಟುಗಳ ಪರವಾಗಿದ್ದೇವೆ ಎಂದು ಸಚಿವರು ಹೇಳಿದ್ದಾರೆ.
ಮೋದಿ ಸರ್ಕಾರದ ಅಡಿಯಲ್ಲಿ ಕ್ರೀಡಾ ಬಜೆಟ್ ಅನ್ನು ₹ 874 ಕೋಟಿಯಿಂದ ₹ 2782 ಕೋಟಿಗೆ ಹೆಚ್ಚಿಸಲಾಗಿದೆ. ಖೇಲೋ ಇಂಡಿಯಾ ಮತ್ತು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (TOPS) ನಂತಹ ಯೋಜನೆಗಳನ್ನು ಪರಿಚಯಿಸಿ ಅದನ್ನು ತಲುಪುವ ಅವಕಾಶವನ್ನು ಒದಗಿಸಲಾಯಿತು. ಕ್ರೀಡಾಪಟುಗಳಿಗೆ ತರಬೇತಿ ನೀಡಲು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗಿದೆ. ರಾಷ್ಟ್ರದಲ್ಲಿ ಸುಮಾರು ₹ 2700 ಕೋಟಿ ವೆಚ್ಚದಲ್ಲಿ 300 ಮಹತ್ವದ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಠಾಕೂರ್ ಹೇಳಿದ್ದಾರೆ.