ಕೊಪ್ಪಳ: ಇಲ್ಲಿ ನಡಿತಾ ಇರೋ ಮದುವೆಯ ವಧು (Bride) ಪಶ್ಚಿಮ ಬಂಗಾಳ ಮೂಲದ ಪೂಜಾ. 4 ವರ್ಷದ ಹಿಂದೆ ಟ್ಯೂಮರ್ ರೋಗಕ್ಕೆ ತುತ್ತಾಗಿ ತನ್ನ ಎರಡು ಕಣ್ಣುಗಳ ದೃಷ್ಠಿಯನ್ನೇ ಕಳೆದುಕೊಂಡಿದ್ದಾಳೆ. ಹೆತ್ತ ತಂದೆಯನ್ನು ಕಳೆದುಕೊಂಡ ಈ ಪೂಜಾಳ ಬಾಳು ಸಹ ಟ್ಯೂಮರ್ ರೋಗದಿಂದ ಕತ್ತಲಾಗಿ ಬಿಟ್ಟಿದೆ. ಸದ್ಯ ಈ ಕತ್ತಲೆಯ ಜೀವನದಲ್ಲಿ ಕೈ ಹಿಡಿದು ನಡೆಸಲು ಆಕೆಯ ಬಾಳಿಗೆ ದೀಪವಾಗಿ ಬಂದಿರುವ ಕನ್ನಡದ ಯುವಕ ಕೊಪ್ಪಳ (Koppala) ನಿವಾಸಿ ಮಂಜುನಾಥ್ ಶೆಟ್ಟಿ.
ಕೊಪ್ಪಳದ ಮಂಜುನಾಥ್ ಶೆಟ್ಟಿ ಹಾಗೂ ಅಂಧ (Blind) ಯುವತಿ ಪೂಜಾ (ಶಿವಾನಿ) ಸದ್ಯ ಒಂದಾಗಿ ಬಾಳ ಪಯಣ ಶುರು ಮಾಡಿದ್ದಾರೆ. ಗುರುವಾರ ಕೊಪ್ಪಳದ ವಾಸವಿ ಕಲ್ಯಾಣ ಮಂಟಪದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಣ್ಣಿಲ್ಲದ ಕತ್ತಲಲ್ಲಿ ಇದ್ದ ತನ್ನ ಜೀವನಕ್ಕೊಂದು ಅರ್ಥ ಸಿಕ್ಕಿದೆ. ಈಗ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಶಿವಾನಿ ಭಾವುಕಳಾಗಿದ್ದಾಳೆ.
ಮಂಜುನಾಥ್ ಶೆಟ್ಟಿ ಕೊಪ್ಪಳದಲ್ಲಿ ಸಣ್ಣ ಉದ್ಯಮಿ. ಸಿಸಿಟಿವಿ ಇನ್ಸ್ಟಾಲೇಶನ್, ಎಣ್ಣೆ ಗಾಣದ ಉದ್ಯಮ ನಡೆಸುತ್ತಾನೆ. ಮದುವೆಯಾದರೆ ಅದಕ್ಕೊಂದು ಅರ್ಥ ಇರಬೇಕು, ವಿಕಲಚೇತನ ವಧುವಿಗೆ ಬಾಳು ಕೊಡಬೇಕು ಎನ್ನುವ ಯೋಚನೆಯಲ್ಲಿ ಮಂಜುನಾಥ್ ಇದ್ದ. ಇದೇ ವೇಳೆ ಮಂಜುನಾಥ್ಗೆ ಪಶ್ಚಿಮ ಬಂಗಾಳದ ಯುವತಿ ಪೂಜಾ ಮದುವೆ ಆ್ಯಪ್ ಒಂದರಲ್ಲಿ ಪರಿಚಯವಾಗಿತ್ತು. ಸದ್ಯ ಎರಡು ಕುಟುಂಬಗಳು ಪರಸ್ಪರ ಒಪ್ಪಿಗೆ ಪಡೆದು ಬಾಳು ಬಂಡಿ ಸಾಗಿಸಲು ತಯಾರಾಗಿ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.