ಶಿಡ್ಲಘಟ್ಟ: ಸರ್ಕಾರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರಿಂದ ಹಣ ಲೂಟಿ ಹೊಡೆಯುವ ಕೆಲಸ ನಡೆದಿದೆ, ಅಧಿಕಾರಿಗಳು ಮದ್ಯವರ್ತಿಗಳಿಗೆ ಕಡಿವಾಣ ಹಾಕುವ ಮೂಲಕ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಶಾಸಕ ಬಿಎನ್ ರವಿಕುಮಾರ್ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನಾನು ಈ ಕ್ಷೇತ್ರದ ಒಬ್ಬ ರೈತನಾಗಿ ಇಲ್ಲಿನ ರೈತರ ಹಾಗು ಜನಸಾಮಾನ್ಯರ ಕಷ್ಟಗಳನ್ನು ಅರಿತಿದ್ದೇನೆ, ಕೆಲ ಇಲಾಖೆಗಳಲ್ಲಿ ಅಕ್ರಮ ನಡೆದಿರುವುದು ನನ್ನ ಗಮನಕ್ಕಿದ್ದು, ಹಿಂದೆ ನಡೆದಿರುವುದನ್ನು ನಾನೀಗ ಪ್ರಶ್ನೆ ಮಾಡುವುದಿಲ್ಲ, ಇನ್ನು ಮುಂದೆ ಕ್ಷೇತ್ರದಲ್ಲಿ ಯಾವ ಅಕ್ರಮಕ್ಕೂ ಅವಕಾಶವಿಲ್ಲತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದರು.
ಜನಸಾಮಾನ್ಯರಿಗೆ ತೊಂದರೆ ಕೊಟ್ಟರೆ ನಿಮಗೂ ತೊಂದರೆ ಆಗುತ್ತದೆ ಎಂಬುದನ್ನು ಅರಿತು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಂದಾಯ ಇಲಾಖೆಯಲ್ಲಿ ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಸಾರ್ವಜನಿಕರನ್ನು ಸುಖಾ ಸುಮ್ಮನೆ ಅಲೆದಾಡಿಸದೆ ತ್ವರಿತವಾಗಿ ಕೆಲಸಗಳನ್ನು ಮಾಡಿ ಮುಗಿಸಬೇಕು ಎಂದು ಸೂಚಿಸಿದರು. ತಾಲೂಕು ಆರೋಗ್ಯ ಅಧಿಕಾರಿ ವೆಂಕಟೇಶ ಮೂರ್ತಿ ಮಾತನಾಡಿ ತಾಲೂಕಿನಲ್ಲಿ ಕೇವಲ ನಾಲ್ಕು ಜನ ಡಯಾಲಿಸಿಸ್ ರೋಗಿಗಳು ಇರುವುದಾಗಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ತಾಲೂಕಿನಲ್ಲಿ ಒಟ್ಟು 273 ಜನ ಡಯಾಲಿಸಿಸ್ ರೋಗಿಗಳಿದ್ದು, ಬೇರೆಡೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದರು. ಆರೋಗ್ಯ ಇಲಾಖೆಯಿಂದ ಇನ್ನುಮುಂದೆ ಯಾವ ಒಂದು ದೂರು ಬರದ ಹಾಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಪ್ರತಿ ಇಲಾಖೆಯ ಪ್ರತ್ಯೇಕ ಸಭೆಗಳನ್ನು ನಡೆಸಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ಆಶಾಲತಾ, ತಹಶಿಲ್ದಾರ್ ಬಿಎನ್ ಸ್ವಾಮಿ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ, ಪೋಲಿಸ್ ಇನ್ಸ್ಪೆಕ್ಟರ್ ನಂದಕುಮಾರ್ ಹಾಗು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.